Thursday, January 24, 2013

ಸಾವಿನೆಡೆಗೊಮ್ಮೆ ಮುಖ ಮಾಡುವುದು ಹೇಡಿತನವಾ?

ಸಾವು.. ಸಾವು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ ಅಂತಾರಲ್ಲ... ಸಾವು ಸಮಸ್ಯೆಗಳಿಗೆ ಪರಿಹಾರವಲ್ಲವಾ? ಈಸ ಬೇಕು ಇದ್ದು ಜಯಿಸಬೇಕು. ಸಾವು ಪ್ರತಿಯೊಬ್ಬರು ಎದುರುಗೊಳ್ಳಲೇಬೇಕಾದ ಅಂತಿಮ ಘಟ್ಟವಾಗಿರುವಾಗ, ಸಾವು ಸಮಸ್ಯೆಗಳಿಗೆ ಹೇಗೆ ಪರಿಹಾರವಲ್ಲ?
ಪ್ರತಿ ಕ್ಷಣವೂ ಹೋರಾಡಿ ಕೊನೆಗೆ ದಕ್ಕುವುದಾದರೂ ಏನು?
ನೆಮ್ಮದಿಯ ಜೀವನ?
ನಂತರ?
ಏನೂ ಇಲ್ಲ..
 ಹೋರಾಟವೇ ಜೀವನವಾ?
ಛೇ.... :(
ಸಮಸ್ಯೆಗಳು ಪರಿಹಾರವಾಗದಿರುವುದಕ್ಕೆ ‘ನಾನೇ’ ಕಾರಣನಾ?
‘ನನ್ನದೇ’ ಚಿಂತನೆಗಳು ಸಮಸ್ಯೆಯ ಮೂಲ ಹುಡುಕಲು ಹೊರಟರೆ ಬಹುಶಃ ಎಂದಿಗೂ ‘ನಾನು’ ಕಾರಣವಾಗುವುದೇ ಇಲ್ಲವೇನೋ...
ಆದರೂ ಹೋರಾಟದ ನಂತರದ ಗೆಲುವಲ್ಲಿ ಯಾವುದೇ ಆಸಕ್ತಿ ಇಲ್ಲದಿರುವಾಗ, ಇದ್ದು ಮಾಡುವುದಾದರೂ ಏನು? ನನ್ನ ನಂಬಿದವರ ಗತಿ? ಯಾರನ್ನು ಯಾರೂ ನಂಬಿರುವುದಿಲ್ಲ ಎಂಬ ಅನುಭವ ಅಪ್ಪನ ಅಗಲುವಿಕೆ ಕಲಿಸಿಕೊಟ್ಟಿದೆಯಲ್ಲ,
ಸೋ ಯಾಕೊಮ್ಮೆ, ಸಾವಿನ ಸಂಗಾತಿಯನ್ನು ಅಪ್ಪಿಕೊಳ್ಳಬಾರದು..
‘ನನ್ನಿಂದ’ ‘ನಾನು’ ಹೆಣೆದುಕೊಂಡಿರುವ ಸಮಸ್ಯೆಗಳು ನನ್ನ ಬಂಧನದೊಳಗೆ ಸಿಲುಕಿ ನಲುಗಿ ಮರುಟಿ ಹೋಗಬಹುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿರುವಾಗ, ಆ ಪ್ರೀತಿಯ ಆಲಿಂಗನವನ್ನೇಕೆ ಬರಸೆಳೆದು ಅಪ್ಪಿಕೊಳ್ಳಬಾರದು...?
ಏನೇ ಯಶಸ್ಸು, ಹೆಸರು, ಹಣ ಮಾಡಿದರೂ ಅಂತ್ಯವಾದ ದೇಹದ ಮೇಲಿನ ಮೋಹ ಮಣ್ಣಾಗುವವರೆಗೆ ಮಾತ್ರ ತಾನೇ..? ಆ ನಂತರವೇನಿದ್ದರೂ ಅದ ಬಿಟ್ಟು ಹೋದ ನೆನಪುಗಳ ಮೆರವಣಿಗೆ, ಮರು ನೆನೆಯುವಿಕೆಯ ಭ್ರಮಾತ್ಮಕದ ಅಗೋಚರದೊಳಗೆ ರಮಿಸುವ ಕ್ಷಣಿಕ ಸುಖಗಳು ಮಾತ್ರವಲ್ಲವೇ...?
ಸಾಧನೆ, name n fame ಗೂ ಮೀರಿದ ಅನುಭೂತಿಗಳ ಆಯಸ್ಸಾದರೂ ಎಷ್ಟು ವರ್ಷ?
ಲೌಕಿಕ ಸಂಭಂದಗಳ ಹೆಣೆದ ಬಲೆಯ ಗಟ್ಟಿತನ ಎಲ್ಲಿಯವರೆಗೆ?
ಇಷ್ಟೇನಾ ಜೀವನ?
ಸಾವಿನೆಡೆಗೆ ಮುಖ ಮಾಡುವ ಹೇಡಿ ‘ನಾನಾದೆನಾ?’
ಆದರೂ ಒಮ್ಮೆ ಸಾವು ನೀಡಬಹುದಾದ ಶಾಶ್ವತ ಸುಖದ ಸುಪ್ಪತ್ತಿಗೆಯಲ್ಲೊಮ್ಮೆ ಮಲಗಿ ಬಿಡಲೆ?
ಹಾಗಾದಲ್ಲಿ ನನ್ನ ಈ ಪ್ರಶ್ನೆಯ ಉತ್ತರ ನನಗೆ ಸಿಗುದೆಂತು..

“ಸಾವಿನೆಡೆಗೊಮ್ಮೆ ಮುಖ ಮಾಡುವುದು ಹೇಡಿತನವಾ?”

//ಮಂಸೋರೆ

3 comments:

 1. ಮಂಸೋರೆ,
  ನಿಮ್ಮಾರ್ಟಿಕಲ್ ಓದುತ್ತಾ ನನಗೆ ರೈನರ್ ಮಾರಿಯಾ ರಿಲ್ಕ್ "ಯುವ ಕವಿಗೆ ಬರೆದ ಪತ್ರಗಳು" ಪುಸ್ತಕದ ಒಂದು ಸಾಲು ನೆನಪಾಯ್ತು... "ನಿನ್ನ ದಿನನಿತ್ಯದ ಬದುಕು ರಿಕ್ತವಾದದ್ದು ಎನಿಸಿದರೆ ಬದುಕನ್ನು ನಿಂದಿಸಬೇಡ, ನಿನ್ನನ್ನೇ ನಿಂದಿಸಿಕೋ.... ಬದುಕಿನ ಶ್ರೀಮಂತಿಕೆಯನ್ನು ಕಾಣಲಾರದ ನಿನ್ನ ರಿಕ್ತತೆಯನ್ನು ನಿಂದಿಸಿಕೋ...!"

  ನನ್ನಾಲೋಚನೆಯಲ್ಲಿ ಸಾವೆಂಬುದು ಒಂದು ಅದ್ಬುತವಾದ ಕ್ಷಣ!ಒಂದೇ ಸಲ ಅನುಭವಿಸೋಕೆ ಸಾಧ್ಯವಾಗುವಂತಹ ಕ್ಷಣ. ಅದು ಕರೆದಾಗ ಹೋದರೆ ಮಾತ್ರ ಅದರ ಅದ್ಭುತತೆಯ ಅನುಭವವಾಗೋದು ಅಂತ ನನ್ನಸಿಕೆ! ಕರೆಯದಲೇ ಹೋಗುವುದು ಯಾವ ಕಾಲಕ್ಕೂ ಸಮ್ಮತವಲ್ಲ!!
  ಸವಿತ ಎಸ್ ಆರ್

  ReplyDelete
 2. I don't know how I should I read this post of yours, Let me read it straight!
  ಸಾವಿನೆಡೆಗೆ ಮುಖ ಮಾಡುವುದು ಹೇಡಿತನವಲ್ಲ. ಅದು ಸಮಸ್ಯೆಯ ಅನೇಕ ಪರಿಹಾರಗಳಲ್ಲೊಂದು ಪರ್ಯಾಯವಷ್ಟೇ. ಪ್ರತಿಯೊಬ್ಬರೂ ಯಾವುದೋ ಒಂದು ಸಂದರ್ಭದಲ್ಲಿ ಆ ಮಾರ್ಗವನ್ನು ಯೋಚಿಸಿರುತ್ತಾರೆ. ಆದರೆ ಆ ಆಲಿಂಗನಕ್ಕಾಗಿರುವ ತುಡಿತದ ತೀವ್ರತೆಯಲ್ಲಿ ವ್ಯತ್ಯಾಸವಾಗಿರುತ್ತದೆ. ಆದರೂ ಬಹುತೇಕರು ಆ ಪರ್ಯಾಯದ ಮೊರೆ ಹೋಗುವುದಿಲ್ಲ. ಅದುವೇ ಜೀವನ! ನನ್ನ ಅಗಲುವಿಕೆಯಿಂದ ಪ್ರಪಂಚದಲ್ಲಾಗುವ ವ್ಯತ್ಯಾಸವೇನೂ ಇಲ್ಲ ಎಂಬ ಭಾವನೆಯ ಜೊತೆಗೆ, ಸಮಸ್ಯೆಗಳಿಗೆಲ್ಲ ಶಾಶ್ವತ ಪರಿಹಾರದ ಸಂತೋಷ ಎಷ್ಟರ ಮಟ್ಟಿಗೆ ಸಾವಿನೆಡೆಗೆ ಸೆಳೆಯುತ್ತದೆಂದರೆ ಸಾವಿನ ನಂತರದ ಸುಖದ ಸುಪ್ಪತ್ತಿಗೆಯ ಭ್ರಮೆಯೇ ನಿಜವೆನಿಸಿಬಿಡುತ್ತದೆ. ಇದು ಲೌಕಿಕ ಮಾತ್ರ ಎಂದು ಬದುಕನ್ನು ತಿರಸ್ಕರಿಸುವ ಪಾರಮಾರ್ಥಿಕ ವೇದಾಂತಿಗಳಾಗಿಬಿಡುತ್ತೇವೆ, ಏಕಾಏಕಿ!
  ಆದರೆ, ಈ ಪರ್ಯಾಯದ ವಿಪರ್ಯಾಸವೆಂದರೆ, ಇದರ ಅಂತ್ಯವನ್ನು ತಿರುಗಿಸಲು ಸಾಧ್ಯವಿಲ್ಲ. ಛೇ! ನಾನಿದ್ದಿದ್ದರೆ ಹೀಗೆ ಮಾಡಬಹುದಾಗಿತ್ತು ಎನ್ನುವುದಕ್ಕೂ ನಾವಿರುವುದಿಲ್ಲ. Its an irreversible process! ಬಹುಶ: ಆ ಕಾರಣಕ್ಕಾಗಿಯೇ ಸಾವು ಎನ್ನುವ ಅನುಭವ ಅತ್ಯಂತ ಆಕರ್ಷಣೀಯವಾಗಿ ಕಂಡರೂ ನಾವಾಗಿ ಬೆನ್ನತ್ತಿ ಹೋಗದೆ, ಅದರ ಆಗಮನಕ್ಕಾಗಿ ಕಾಯುವುದರಲ್ಲೇ ಸುಖವಿದೆ ಎಂದೆನಿಸುತ್ತದೆ. ಆಗಮಾತ್ರ ಅದನ್ನು ಸಂಪೂರ್ಣವಾಗಿ ಅನುಭವಿಸಬಹದು!

  ನಮ್ಮ ಅಗಲಿಕೆಯಿಂದ ನಂಬಿದವರಿಗೆ ತೊಂದರೆಯಾಗದಿದ್ದರೂ, ನಮ್ಮ ಹೊರತಾಗಿ ಇರುವುದು ಕಾಲಕ್ರಮೇಣ ಅಭ್ಯಾಸವಾದರೂ, ಕಣ್ಣೀರು ಬತ್ತಿಹೋದರೂ ನಮ್ಮ ಆಪ್ತ ವಲಯದಲ್ಲಿ ನಾವೊಂದು ಶೂನ್ಯವನ್ನು ಸೃಷ್ಟಿಸಿ ಬಿಟ್ಟಿರುತ್ತೇವೆ. ಅಂಥದೊಂದು ಖಾಲಿತನದೊಂದಿಗೆ ಬದುಕುವ ಹಿಂಸೆ, ಆ ನಿರ್ವಾತಕ್ಕೆ ತಮ್ಮನ್ನೇ ಹೊಣೆಯಾಗಿಸಿಕೊಳ್ಳುತ್ತ ಸ್ವತ: ಅಪರಾಧಿಗಳಾವುದು, ಬೆನ್ನಹಿಂದಾಡಿಕೊಳ್ಳುವ ಸಮಾಜಕ್ಕೆ ಬೆನ್ನು ತೋರಿಸುವ ಪ್ರಯತ್ನದ ಮೂರ್ಖತನ..... ಬಹುಶ: ಅಂತಹ ಸಾವಲ್ಲದ ಸಾವಿನ ಮನೆಯವರಿಂದ ಯಾವ ಧೈರ್ಯಸ್ಥನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ!!!

  ನಿಮ್ಮ ಬ್ಲಾಗಿನ background ಸೂಪರ್ರಾಗಿದೆ!! ನಿಮ್ಮದೇ painting ಅಂದುಕೊಳ್ತೀನಿ :)

  ReplyDelete
 3. ಸಾವು ಅಂದರೇನು ? ಜನ್ಮ ಅಂದರೇನು ? ನಿಜವಾಗಿಯು ನೀನು ಹುಟ್ಟಿರುವೆಯಾ‌? ನೀನು ಹುಟ್ಟುವಾಗ ಇದೇ ರೀತಿ ಯೋಚನೆ ಮಾಡಿಕೊಂಡು ಭೂಮಿಗೆ ಬಂದದ್ದು. ಸಾವಿಗೆ ಗೊತ್ತು ನಿನ್ನನ್ನು ಯಾವಾಗ ? ಹೆಂಗೆ ?‌ ಎಲ್ಲಿ ? ಎಷ್ಟು ಹೊತ್ತಿಗೆ ? ಯಾರ ಮುಂದೆ ಸಾಯಿಸಬೇಕು ಅಂತಾ . ಸಮಾಧಾನದಿಂದ ಬದುಕುವುದು ಕಲೆತರೆ.. ಸಮಾಧಾನದಿಂದ ಸಾಯೋದು ಕಲಿಯಬಹುದು...
  ಆದರು ಸಾಯುವ ಕಲೆಯನ್ನು ಅರಿತಿದ್ದರೆ ಒಳ್ಳ್ಳೆಯದು..
  http://www.summum.us/mummification/tbotd/

  ReplyDelete