ಸುರಿಯುವ ಮಳೆ
ನಿನ್ನೊಡಲ ಬರವ
ನೀಗುವುದೇ?
ಎಷ್ಟು ವರ್ಷಗಳಾಯಿತು
ನಿನ್ನೊಡಲ ಜೀವ ಸೆಲೆ
ಮೈದುಂಬಿ ಹರಿದು,
ದೇಹ ಹಸಿರ ಸೀರೆ ಉಟ್ಟು,
ನಿನ್ನ ಮಗುವಿನಾ
ಮೊಗವು ಆನಂದದೀ
ನಲಿದು..
ಎಷ್ಟು ವರ್ಷಗಳಾಯಿತು?
ಹಸಿರ ಸೀರೆ ಹರಿದು
ಕಿತ್ತು , ಬಿರುಕೊಡೆದ
ನೆಲ ಬೆತ್ತಲಾಗಿ,
ನಿನ್ನ ನರನಾಡಿಗಳಲಿ
ಜೀವ ಜಲ ಬತ್ತಿ
ಎದೆ ಹಾಲು ಸೊರಗಿರಲು..
ಬದುಕಲೇ ಬೇಕಾದ
ಅನಿವಾರ್ಯತೆಗೆ
ನಿನ್ನ ಮಕ್ಕಳು
ಹಾಕಿಹರು
ದೇಹದ ಮೇಲೆಲ್ಲಾ
ಸಾವಿರಾರು ಅಡಿಗಳವರೆಗೆ
ಲಕ್ಷಾಂತರ ತೂತುಗಳನ್ನು.
ಆ ಕಾಲಕೆ ಚಿನ್ನದಾ ಹೊಳೆ ಹರಿಸಿ
ಇಡೀ ನಾಡಿಗೆ
ಹೆಮ್ಮೆಯಾಗಿದ್ದ ನೀನು,
ಇಂದು ಬರೀ ದೂಳು,
ಗಾಯಗಳ ಹೊತ್ತು,
ಹನಿ ನೀರಿಗಾಗಿ
ಹಂಬಲಿಸುತ್ತಿರುವೆ,
ನಿನ್ನ ಕಣ್ಣಾಲಿಗಳಿಗೆ
ಹನಿ ನೀರು ಸುರಿಸಲಾಗುತ್ತಿಲ್ಲ.
ಕವಿ ಪುಂಗವರ
ಪದಗಳಲ್ಲಿ ಹಾಡಿ ಹೊಗಳಲ್ಪಟ್ಟ
ನಿನ್ನ ಗತಿ ಯಾರಿಗೂ
ಕಾಣದಂತಾಯ್ತಲ್ಲ..
-ಮಂಸೋರೆ
No comments:
Post a Comment