Thursday, December 6, 2012

ಜೀವ ಜಲ ಬತ್ತಿ ಎದೆ ಹಾಲು ಸೊರಗಿರಲು


ಸುರಿಯುವ ಮಳೆ
ನಿನ್ನೊಡಲ ಬರವ
ನೀಗುವುದೇ?
ಎಷ್ಟು ವರ್ಷಗಳಾಯಿತು
ನಿನ್ನೊಡಲ ಜೀವ ಸೆಲೆ
ಮೈದುಂಬಿ ಹರಿದು,
ದೇಹ ಹಸಿರ ಸೀರೆ ಉಟ್ಟು,
ನಿನ್ನ ಮಗುವಿನಾ
ಮೊಗವು ಆನಂದದೀ
ನಲಿದು..
ಎಷ್ಟು ವರ್ಷಗಳಾಯಿತು?
ಹಸಿರ ಸೀರೆ ಹರಿದು
ಕಿತ್ತು , ಬಿರುಕೊಡೆದ
ನೆಲ ಬೆತ್ತಲಾಗಿ,
ನಿನ್ನ ನರನಾಡಿಗಳಲಿ
ಜೀವ ಜಲ ಬತ್ತಿ
ಎದೆ ಹಾಲು ಸೊರಗಿರಲು..
ಬದುಕಲೇ ಬೇಕಾದ
ಅನಿವಾರ್ಯತೆಗೆ
ನಿನ್ನ ಮಕ್ಕಳು
ಹಾಕಿಹರು
ದೇಹದ ಮೇಲೆಲ್ಲಾ
ಸಾವಿರಾರು ಅಡಿಗಳವರೆಗೆ
ಲಕ್ಷಾಂತರ ತೂತುಗಳನ್ನು.
ಆ ಕಾಲಕೆ ಚಿನ್ನದಾ ಹೊಳೆ ಹರಿಸಿ
ಇಡೀ ನಾಡಿಗೆ
ಹೆಮ್ಮೆಯಾಗಿದ್ದ ನೀನು,
ಇಂದು ಬರೀ ದೂಳು,
ಗಾಯಗಳ ಹೊತ್ತು,
ಹನಿ ನೀರಿಗಾಗಿ
ಹಂಬಲಿಸುತ್ತಿರುವೆ,
ನಿನ್ನ ಕಣ್ಣಾಲಿಗಳಿಗೆ
ಹನಿ ನೀರು ಸುರಿಸಲಾಗುತ್ತಿಲ್ಲ.
ಕವಿ ಪುಂಗವರ
ಪದಗಳಲ್ಲಿ ಹಾಡಿ ಹೊಗಳಲ್ಪಟ್ಟ
ನಿನ್ನ ಗತಿ ಯಾರಿಗೂ
ಕಾಣದಂತಾಯ್ತಲ್ಲ..

-ಮಂಸೋರೆ

ಗೊಂದಲದ ಗೂಡು

ಸೋಮಾರಿತನವೋ ಅಥವ ಬೇಸರವೋ ಗೊತ್ತಿಲ್ಲ ಬ್ಲಾಗ್ ಬರೆಯೋದಿಕ್ಕೆ ಮೊದಲಿನಂತೆ ಆಸಕ್ತಿ ಉಳಿದಿಲ್ಲ. ಜೀವನದ ಪ್ರಮುಖ ಘಟ್ಟನಗಳನ್ನು ಹೊರತುಪಡಿಸಿ ಇನ್ನೇನನ್ನೂ ದಾಖಲಿಸುವ ಮನಸ್ಸಾಗುತ್ತಿಲ್ಲ ಎಂಬ ಚಿಂತೆಯಲ್ಲೇ ಹಲವು ದಿನಗಳ ನಂತರ ಬ್ಲಾಗ್ ಬರೆಯಲು ತೊಡಗಿದ್ದೇನೆ.

ಹೇಗಿದ್ದೆ .... ಹೇಗಾದೆ? ಯಾವುದೇ ದೂರದೃಷ್ಟಿ ಇಲ್ಲದೆ ಆರಂಭಿಸಿದ ಪಯಣ ಇಂದು ಎಲ್ಲೋ ಸಾಗುತ್ತಿದೆ. ನಾನ್ಯವತ್ತು ಮುಂದೆ ಇಂತಹದ್ದೇ ಜೀವನ ನಡೆಸಬೇಕೆಂಬ ಆದರ್ಶಗಳನ್ನು ಕಟ್ಟಿಕೊಂಡವನಲ್ಲ. ಗಾಳಿ ತೂರಿದ ಕಡೆಗೆ ಸಾಗುತ್ತಾ ಬಂದೆ. ಆದರೆ ಅಪ್ಪನ ಸಾವು ಇಂತಹ ಅನಿರ್ಧಿಷ್ಟತೆಗೆ ಬ್ರೇಕ್ ಹಾಕಿತು.

ಎರಡು ವರ್ಷದ ಡಿಗ್ರಿ ಮುಗಿಸಲು ಬೆಂಗಳೂರಿಗೆ ಬಂದವನು ಇಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತ ಸಾಗಿದ್ದೇನೆ. ಅಂದು ಕಲಾವಿದನಾಗಬೇಕೆಂದು ಬಯಸಿದವನು ಇಂದು ಕಲೆಯನ್ನು ಮೂಟೆಕಟ್ಟಿ ಬರವಣಿಗೆಯಲ್ಲಿ ಮುಳುಗಿದ್ದೇನೆ. ಇಲ್ಲಿಯವರೆಗೂ ಸಾಗಿದ ಪಯಣದಲ್ಲಿ ಏನೇನೆಲ್ಲ ಮಾಡಿದ್ದಾಯ್ತು.. ಆದ್ರೂ ಇನ್ನೂ ಏನೋ ಮಾಡಬೇಕೆಂಬ ತವಕ ಕಾಡುತ್ತಲೇ ಇದೆ. ಅದು ಮಾಡಬೇಕೆಂಬ ತವಕವಷ್ಟೇ ಹೊರತು ಅದರಲ್ಲೇ ಜೀವನ ಸಾಗಬೇಕೆಂಬ ಹಂಬಲ ಇಲ್ಲದಿರುವುದು ಸರೀನಾ ತಪ್ಪಾ ಎಂಬ ಜಿಜ್ಞಾಸೆಯೇ ಮತ್ತಷ್ಟು ಖಿನ್ನತೆ ಮೂಡಿಸುತ್ತಿದೆ.

ಜೀವನದಲ್ಲಿ ಕೆಲವೊಮ್ಮೆ ತೆಗೆದುಕೊಳ್ಳುವ ಆತುರ ನಿರ್ಣಯಗಳಿಂದ ನರುಳುವುದೂ ಕಡಿಮೆ ಆಗಿಲ್ಲ. ಅದರ ಫಲಿತ ಅನುಭವಿಸುತ್ತಲೆ ಇದ್ದೇನೆ. ಅಪ್ಪನ ಸಾವಿನಿಂದಾಗಿ ಕೆಲವೊಂದು ಸೀಮಿತ ಜವಾಬ್ದಾರಿಗಳನ್ನು ಆದಷ್ಟು ಬೇಗ ಪೂರ್ತಿ ಮಾಡಿ ನನ್ನ ಕನಸುಗಳೆಡೆಗೆ ಸಾಗೋಣ ಅಂತ ಪ್ರಯತ್ನಿಸಿ ಕೊನೆಗೆ ಏನೂ ಮಾಡಲಾಗದೆ ಸೋತ ಹೇಡಿಯಂತೆ ಪತ್ರಿಕೋದ್ಯಮದಲ್ಲಿ ಕಾಲ ತಳ್ಳುತ್ತಿದ್ದೆನೆ. ನಾನೇ ಹುಟ್ಟು ಹಾಕಿಕೊಂಡ ಸಮಸ್ಯೆಗಳನ್ನು ಬಗೆಹರಿಸಲಾಗದೆ, ಚಿಂತೆಗಳಲ್ಲಿ ನರಳುತ್ತಾ ಕಾಲ ತಳ್ಳುತ್ತಿದ್ದೇನೆ.
‘ಛೇ ಬೇಕಿತ್ತಾ ನನಗೆ ಇದೆಲ್ಲಾ? ನಾನು ಯಾಕೆ ಎಲ್ಲರಂತೆ ಓದು ಮುಗಿಸಿದ ತಕ್ಷಣ ಕೆಲಸಕ್ಕೆ ಸೇರ್ಕೊಳ್ಳಿಲ್ಲ. ಸೇರಿದ್ರೆ ಇಷ್ಟೊತ್ತಿಗೆ ಯಾವ ಸಮಸ್ಯೆಯೂ ಇಲ್ಲದೆ ಆರಾಮಾಗಿರಬಹುದಿತ್ತಲ್ಲ’ ಎಂದು ಕೊರಗುವುದೇ ಹೆಚ್ಚಾಗಿದೆ. ಎಂದಿಗೂ ನನ್ನ ಸಮಸ್ಯೆಗಳು ಬಗೆಹರಿಯುವುದೇ ಇಲ್ಲವೆ? ನನ್ನ ಜೀವನದ ಅನುಭವಗಳಿಂದ ಕಂಡ ಕನಸುಗಳನ್ನು ಎಂದಿಗೂ ನೆರವೇರಿಸಲಾಗುವುದೇ ಇಲ್ಲವೇ?  ಪ್ರಶ್ನೆಗಳು ಮತ್ತಷ್ಟು ಪ್ರಶ್ನೆಗಳನ್ನು ಸೃಷ್ಟಿಸುತ್ತಿವೆ. ಮನಸ್ಸು ಮತ್ತಷ್ಟು ಗೊಂದಲದ ಗೂಡಾಗುತ್ತಿದೆ. ಇದೆಲ್ಲವುದರ ಮಧ್ಯೆ ಮತೊಂದೆಡೆ ಕೆಲಸಕ್ಕೆ ತಯಾರಿ ನಡೆಸಿದ್ದೇನೆ. ಅದರ ಫಲಿತಾಂಶ ಏನಾಗುತ್ತೋ ನೋಡಬೇಕು..

ಎಂತ ವೇಸ್ಟ್ ಜೀವನ ನಂದು......  

Saturday, August 25, 2012

ಏನೂ ಬದಲಾಗಲಿಲ್ಲ

ಅಂತು...
ಎರಡನೆಯ ವರ್ಷವು ಕಳೆಯಿತು..
ಏನೂ ಬದಲಾಗಲಿಲ್ಲ..
ಗಿಡ ಬೆಳೆದು ಟಿಸಿಲೊಡೆದಿದೆ..
ಭೂಮಿ ಎರಡು ವಸಂತಗಳನ್ನು
ಕಂಡಿತು..
ಏನೂ ಬದಲಾಗಲಿಲ್ಲ..
ಮನಸಿನಾಳದಲಿ ಹುದುಗಿರುವ..
ನೋವಿನ ನೆನಪುಗಳು..
ಆಗಾಗ ತನ್ನ ಇರುವನ್ನು
ತೋರಿಸುತ್ತಿದ್ದರು..
ಏನೂ ಬದಲಿಲ್ಲ..
ಕನಸಿನ ಗುರಿ ಸೇರಲಿಲ್ಲ...
ಮಾಡಬೇಕೆಂದಿದ್ದ
ಯಾವ ಕೆಲಸಗಳು ನೆರವೇರಲಿಲ್ಲ..
ಏನೂ ಬದಲಾಗಲಿಲ್ಲ..
ನನ್ನ ಪಯಣದ ಹಾದಿಯ ಬಿಟ್ಟು
ಏನೂ ಬದಲಾಗಲಿಲ್ಲ.

Friday, August 24, 2012

ಇನ್ನು ಮೂರು ಅಥವ ಐದು ವರ್ಷ

ಸರಿಯಾಗಿ ಎರಡು ವರ್ಷಗಳ ಹಿಂದೆ.. ಇಂದಿನಂತೆಯೇ ಅಂದು ಮಳೆ ಸುರಿಯುತ್ತಲೇ ಇತ್ತು.. ಮನದೊಳಗೆ ಕಟ್ಟಿದ್ದ ದುಃಖದ ಒಡಲು ಇನ್ನಷ್ಟು ದುಃಖವನ್ನು ಸೇರಿಸಿಕೊಳ್ಳುತ್ತಿತ್ತು. ಪಿತಾಜಿ ನೀವು ಇಲ್ಲಿನ ನಿಮ್ಮ ಪಾಲಿನ ಕೆಲಸಗಳನ್ನು ಮುಗಿಸಿ ಹೊರಡಲು ಅಣಿಯಾಗಿದ್ದೀರೆಂಬ ವಿಷಯ ಬೆಳಗ್ಗೇನೆ ಗೊತ್ತಾಗಿತ್ತು. ನಾವು ಅನುಮತಿಸುವುದಿಲ್ಲ ಎಂಬ ಭಾವದಿಂದಲೇ ನಮ್ಮೊಂದಿಗೆ ಮಾತಿನ ಸಂಪರ್ಕ ತೊರೆದು.. ನಿಮ್ಮ ಪಯಣದ ದಿನಗಳನ್ನು, ಮಾತುಗಳನ್ನು ಮೆಲುಕು ಹಾಕುತ್ತಿದ್ರಿ, ಅಷ್ಟು ದೈಹಿಕ ನೋವನ್ನು ಸಹಿಸಿಕೊಂಡೂ ಸಹ ನಿಮ್ಮ ಸ್ನೇಹಿತರನ್ನು ನೆನಪುಗಳನ್ನು ಮೆಲುಕು ಹಾಕುತ್ತಿದ್ರಿ. ನಾವು ನಿಮ್ಮನ್ನು ನಿಮ್ಮ ನೆಚ್ಚಿನ ವಿಧ್ಯಾಪೀಠಕ್ಕೆ ಕರೆದುಕೊಂಡು ಹೋಗುವ ತಯಾರಿಯಲ್ಲಿದ್ವಿ. ಇಷ್ಟೊತ್ತಿನಲ್ಲಿ ನಿಮಗೆ ಕೊನೆಯ ಬಾರಿ ಡಯಾಲಿಸಿಸ್ ನಡೆಯುತ್ತಿತ್ತು.ಅಕ್ಕ ಅಮ್ಮ ಅಲ್ಲೇ ಇದ್ರು. ನಿಮ್ಮ ಅಣ್ಣ ಅಣ್ನನ ಮಗ ಸೋಮ ನೂ ಇದ್ದ ಪ್ರಶಾಂತ್ ಅಲ್ಲಿಗೆ ಬಂದಿದ್ದ. ನಾನ್ಯಾವತ್ತೂ ನಿಮ್ಮ ಜವಾಬ್ದಾರಿಗಳನ್ನು ಪೂರೈಸುವಂತೆ ಭರವಸೆಯ ಕೆಲಸಗಳನ್ನು ಮಾಡಿರಲಿಲ್ಲ. ನಾನು ನನ್ನ ಕನಸುಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಅದರೆಡೆಗೆ ಮಾತ್ರ ನನ್ನ ಗುರಿ ಇತ್ತು. ಆ ಕನಸುಗಳನ್ನು ನನಸು ಮಾಡಿ ನಿಮಗೆ ತೋರಿಸಬೇಕೆಂಬ ಹಟ ಬಿಟ್ಟರೆ ನೀವು ಬಯಸಿದ್ದ ಜವಾಬ್ದಾರಿಯುತ ಮಗನಾಗಿ ಎಂದೂ ಇರಲಿಲ್ಲ.

 ನನ್ನ ಜವಾಬ್ದಾರಿಗಳಿಂದ ಯಾವಗಲು ವಿಮುಖನಾಗಿದ್ದೆ. ನೀವು ನನಗೆ ಯಾವುದೇ ಒತ್ತಡ ಹೇರದೆ, ನನ್ನ ಕನಸುಗಳಿಗೆ ಹೆಗಲು ಕೊಡುತ್ತಲೇ ಬಂದಿದ್ರಿ. ಹಾಗಿದ್ದು ಯಾವ ನಂಬಿಕೆಯ ಮೇಲೆ ಈ ಜವಾಬ್ದಾರಿಗಳನ್ನೆಲ್ಲ ನನ್ನ ಹೆಗಲಿಗೆ ವರ್ಗಾಯಿಸಿ ಹೊರಟು ಬಿಟ್ರಿ, ಈಗಿನ ಸಮಯದಿಂದ ಸರಿಯಾಗಿ ಇಪ್ಪತ್ನಾಲ್ಕು ಘಂಟೆಗಳ ನಂತರ ನೀವು ನಮಗೆ ಭೌತಿಕವಾಗಿ ಗುಡ್ ಬೈ ಹೇಳಿಬಿಟ್ರಿ. ನೀವು ಯಾವ ನಂಬಿಕೆಯ ಆಧಾರದ ಮೇಲೆ ನನಗೆ ಜವಾಬ್ದಾರಿ ಹೊರಿಸಿ ಹೊರಟರೋ ಗೊತ್ತಿಲ್ಲ. ನಾನು ಯಾವ ಜವಾಬ್ದಾರಿಯನ್ನು ಪೂರೈಸಲಾಗಲಿಲ್ಲ. ಈ ಎರಡು ವರ್ಷಗಳ ಅವಧಿಯಲ್ಲಿ ನನ್ನ ಕನಸುಗಳ ಮೂಲಕವೇ ನಿಮ್ಮ ಜವಾಬ್ದಾರಿಯನ್ನು ಪೂರೈಸೋಣ ಎಂದು ಪ್ರಯತ್ನಿಸಿ ಕೊನೆಗೂ ಗೆಲ್ಲಲಾಗದೆ ಸೋತು ಹೋದೆ. ಅದರ ಪರಿಣಾಮವನ್ನು ಎದುರಿಸುತ್ತಿದ್ದೇನೆ. ನನ್ನ ಜೀವನದ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ. ಇದನ್ನು ನಿವಾರಿಸಲೆಂದೇ ನನ್ನ ಕನಸುಗಳನ್ನು ಬದಿಗಿಟ್ಟು ಪಯಣದ ಹಾದಿಯನ್ನು ಬದಲಿಸುತ್ತಿದ್ದೇನೆ. ಆದರೂ ಧೈರ್ಯ ಸಾಲುತ್ತಿಲ್ಲ.


ಈಗಿನ ಹಾದಿಯಲ್ಲಿ ಪಯಣಿಸಿದರೂ ಎಷ್ಟು ವರ್ಷಗಳು ಬೇಕಾಗುತ್ತೋ ಗೊತ್ತಿಲ್ಲ. ಮುಂದಿನ ನನ್ನ ಜೀವನ ಎಲ್ಲಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲರಿನಂತೆ ಅದೇ ನೀರಸ ಜೀವನ ಬಾಳಲು ನನಗೆ ಇಷ್ಟ ಇಲ್ಲ. ನೀವು ಹೊರಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸಲಷ್ಟೇ ಹಾದಿಯನ್ನು ಬದಲಿಸುತ್ತಿರುವುದು. ಅದು ಇನ್ನು ಮೂರು ವರ್ಷಗಳಾಗಬಹುದು, ಅಥವ ಐದು ವರ್ಷಗಳಾಗಬಹುದು. ಆ ಜವಾಬ್ದಾರಿಗಳೆಲ್ಲ ತೀರಿ.. ಅದೇ ಹಾದಿಯನ್ನು ಮುಂದುವರೆಸಬೇಕಾದ ಅನಿವಾರ್ಯತೆ ಎದುರಾದಲ್ಲಿ. ಖಂಡಿತ ಈ ಜೀವನವನ್ನು ಮುಂದುವರೆಸುವುದಿಲ್ಲ. ನಾನು ನಿಮ್ಮನ್ನು ಸೇರಿಕೊಂಡು ಬಿಡುತ್ತೇನೆ. ಇದು ನಿಶ್ಚಿತ. ನನ್ನಂತ ಸೋತ ಮಗನಿಗೆ ಅರ್ಥವೇ ಇಲ್ಲದ ಪಯಣ ಮುಂದುವರೆಸುವುದು ನಿರರ್ಥಕ. ಈಗಿನ ಸೋಲೇ ಈ ನಿಟ್ಟಿನಲ್ಲಿ ಆಲೋಚಿಸುವಂತೆ ಮಾಡಿದ್ದರು. ನೀವು ನನ್ನ ನಂಬಿ ಬಿಟ್ಟು ಹೋದ ಕೆಲಸಗಳಿಗಾಗಿ ಈ ಹಾದಿಯಲ್ಲಿ  ಇನ್ನು ಕೆಲ ಕಾಲ ಮುಂದುವರೆಯಲು ನಿಷ್ಚಯಿಸಿದ್ದೇನೆ.
 ಇನ್ನು ಮೂರು ಅಥವ ಐದು ವರ್ಷ

ಮಂಸೋರೆ

Sunday, July 29, 2012

ಸೋತ ಮಗನ ಪತ್ರ

ಪಿತಾಜಿ ಕೊನೆಗೂ ಸೋತೆ..ನಿಮ್ಮನ್ನು ಕಳೆದುಕೊಂಡ ದಿನದಂದು ನಾನು ಮಾತು ಕೊಟ್ಟಂತೆ ಯಾವ ಕಾರ್ಯವನ್ನು ಈ ಎರಡು ವರ್ಷಗಳಲ್ಲಿ ನನ್ನಿಂದ ನೆರೆವೇರಿಸಲು ಸಾದ್ಯವಾಗಲಿಲ್ಲ. ನಾನು ಮಾತು ಕೊಟ್ತ ದಿನಕ್ಕೆ ಇನ್ನೂ ೨೫ ದಿನಗಳು ಬಾಕಿ ಇವೆ. ಆದರೆ ಈ ಎರಡು ವರ್ಷಗಳಲ್ಲಿ ಸಾಧ್ಯವಾಗದಿದ್ದದ್ದು.. ಈ ೨೫ ದಿನಗಳಲ್ಲಿ ಸಾಧ್ಯವಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ನೀವು ಇಟ್ಟಿದ್ದ ನಂಬಿಕೆಯನ್ನು ನಾನು ಉಳಿಸಿಕೊಳ್ಳಲಾಗಲಿಲ್ಲ. 


ನನ್ನನ್ನು ಕ್ಷಮಿಸಿ ಎಂದು ಕೇಳಿಕೊಳ್ಳಲು ಅರ್ಹನಾಗದೆ ಹೋದೆ. ಜೀವನದ ಹಾದಿಯಲ್ಲಿ ಕನಸುಗಳ ಬೆನ್ನೇರಿ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲಾಗದ ಮಗನಾದೆ. ನನ್ನ ಕ್ಷಮಿಸಿಬಿಡಿ. ನನ್ನ ಹಾದಿಯಲ್ಲಿ ಸೋತ ನಾನು ನನ್ನ ಹಾದಿಯನ್ನು ಬದಲಿಸ ಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಗೊಂದಲದಲ್ಲಿದ್ದೇನೆ. 


ಕನಸಿನ ಬೆನ್ನೇರಿ ಹೊರಟ ಜೀವನ ಪಯಣ ಮಗ್ಗುಲು ಬದಲಿಸುವ ಸಮಯ ಬಂದಿದೆಯೇನೊ ಎಂಬ ನಂಬಿಕೆ ಬಲವಾಗಿ ಕಾಡುತ್ತಿದೆ. ಕನಸಿನ ಬೆನ್ನೇರಿ ಸಾಗುವ ಜೀವನದ ಹಾದಿ ಸುಗಮವಲ್ಲವೆಂದು ತಿಳಿದಿದ್ದರು ನನ್ನ ಮೇಲೆ ನನಗಿರುವ ನಂಬಿಕೆಯ ಬುನಾದಿಯ ಮೇಲೆ ಪಯಣ ಆರಂಭಿಸಿ ಕುಂಟುತ್ತಾ ಇಲ್ಲಿಯವರೆಗು ಸಾಗಿ ಬಂದೆ.. ಆದರೆ .. ಆ ಹಾದಿ ಈಗ ಡೇಡ್ ಎಂಡ್ ಗೆ ಬಂದಿದೆಯೇನೋ ಎಂದು ಅನಿಸುತ್ತಿದೆ.. ಈಗ ಹಾದಿ ಬದಲಿಸಲೇ ಬೆಕಾದ ಅನಿವಾರ್ಯತೆಗಳು ಎದುರಾಗಿವೆ.. ಇಲ್ಲಿಯವರೆಗಿನ ಹಾದಿಯಲ್ಲಿ ಗೆಲುವನ್ನು ಕಾಣದಿದ್ದರು ಸೋಲನ್ನು ಕಂಡವನಲ್ಲ.. ನಿಮ್ಮನ್ನು ಕಳೆದುಕೊಂಡಾಗಲು ನೀವಿದ್ದೀರ ಎಂಬ ನಂಬಿಕೆಯಿಂದಲೆ ಇಲ್ಲಿಯವರೆಗು ಸಾಗಿದೆ. ಈಗ ನೀವಿಲ್ಲವೆಂದೇನೂ ಅನಿಸದಿದ್ದರು.. ಎಲ್ಲೋ ನಾನು ಸಾಗುತ್ತಿರುವ ಹಾದಿಗೆ ಸದ್ಯದ ಮಟ್ಟಿಗೆ ಭವಿಶ್ಯವಿದೆಯೆಂಬ ನಂಬಿಕೆ ಬರುತ್ತಿಲ್ಲ. ಬಲವಂತವಾಗಿ ನನ್ನ ಹಾದಿಯನ್ನು ಬದಲಿಸಲೇ ಬೇಡವೇ ಎಂಬ ಗೊಂದಲದಲ್ಲಿ ನಾನಿಂದಿದ್ದೇನೆ.. ಅದೂ ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶವಿದ್ದು.. ಈಗಾಗಲೇ ಕೆಲಸ ಮಾಡುತ್ತಿದ್ದು ಸಹ ನನಗೆ ಇದರಲ್ಲಿ ಸದ್ಯದ ಕ್ಲಿಷ್ಟ ಸನ್ನಿವೇಶವನ್ನು ಎದುರಿಸಬಹುದೆಂಬ ನಂಬಿಕೆಯ ಪರಿಹಾರ ತೋಚುತ್ತಿಲ್ಲ. ಇಷ್ಟು ವರ್ಶಗಳ ಹಾದಿಯಲ್ಲಿ ಕಳೆದ ತಿಂಗಳ ನನ್ನ ಪ್ರಯತ್ನದ ಹೊರತಾಗಿ ನನಗೆ ಸಾಗಿ ಬಂದ ಹಾದಿಯ ಬಗ್ಗೆ ಹೆಮ್ಮೆಯಿದೆ. ಆದರೆ ಸದ್ಯದ ಸಮಸ್ಯೆಗಳಿಂದ ಹೊರಬರುವ ಹಾದಿಯೇ ಕಾಣುತ್ತಿಲ್ಲ.

ಇಲ್ಲಿಯವರೆಗು ವಿರೋದಿಸುತ್ತಲೇ ಬಂದ ಕೆಲಸದ ಫಾರ್ಮೆಟ್ಟಿಗೆ ಜೋತು ಬೀಳುವುದಾ ಅಥವಾ.. ಇನ್ನೂ ಸ್ವಲ್ಪ ದೂರ ಈ ಹಾದಿಯಲ್ಲೇ ಸಾಗುವುದಾ? ಪಿತಾಜಿ ನನಗೆ ದಾರಿ ತೋರಿಸಿ.