Sunday, August 24, 2014

ಇದು ಸೋಲಾ ಅಥವಾ ಸಾಧಿಸಿದೆನಾ?

ಪಿತಾಜಿ,,
ನಾಲ್ಕು ವರ್ಷಗಳು ಕಳೆದೇ ಹೋಯ್ತು.. ನಿಮ್ಮ ನೆನಪುಗಳು ಮಾತ್ರ ಹಾಗೇ ಉಳಿದಿವೆ.. ಮೊದಲಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.. ಪ್ರೀತಿಯ ಅಲೆಯಲ್ಲಿ ಮುಳುಗಿ ಹೋಗಿ ನಿಮ್ಮ ನೆನಪು ಹಾಗೂ ಅದು ನೀಡುತ್ತಿದ್ದ ಆತ್ಮ ಸ್ಥೈರ್ಯವನ್ನು ಕಡೆಗಣಿಸಿಯೇ ಈ ಒಂದು ವರ್ಶ ಕಳೆದು ಬಿಟ್ಟೆ. ಅದು ಒಂಟಿತನದಿಂದ ಮೂಡಿದ ಅಸಹಾಯಕತೆಯಾ? ಅಥವಾ ಈ ಮನಸಿನ ಹೆಸರಲ್ಲಿ ಅನುಭವಿಸಿದ ದೇಹ ದೌರ್ಬಲ್ಯವಾ ಗೊತ್ತಿಲ್ಲ.. ಆದರೂ ಪ್ರೀತಿಯ ಹೆಸರಿನಿಂದಾಗಿ ಬಹು ಪಾಲು ಸಮಯವನ್ನು ಅದನ್ನು ಉಳಿಸಿಕೊಳ್ಳುವ ಬರದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದೆ. ಆ ನೋವಿನಿಂದಾಗಿ ಹುಚ್ಚನಾಗಿ ಅಲೆದೂ ಬಿಟ್ಟೆ.. ಆ ಮೂರು ದಿನಗಳು ರೈಲಿನಲ್ಲಿ ಅಲೆಮಾರಿಯಂತೆ, ಹುಚ್ಚನಂತೆ, ಜನ್ರಲ್ ಕಂಪಾರ್ಟ್ನಲ್ಲಿ ಕೂತು ಇಲ್ಲಿಂದ ನಾಂದೇಡ್, ಅಲ್ಲಿಂದ ಇಟಾರ್ಸಿ.. ಮತ್ತೆ ವಾಪಸ್ಸು ಬೆಂಗಳೂರು..
ಆದರೂ ಮನಸ್ಸಿನ ಮೇಲೆ ಹಿಡಿತ ಸಾಧಿಸಲಾಗಲಿಲ್ಲ. ನಿಜಕ್ಕೂ ನಾನು ಪ್ರೀತಿಯನ್ನು ಉಳಿಸಿಕೊಳ್ಲಲು ಒದ್ದಾಡಿದ್ದಾ ಅಥವಾ ಆಕೆಗೆ ಏನಾಗುತ್ತದೆಯೋ ಎಂಬ ಆತಂಕದಲ್ಲಿ ನನಗೆ ಎಷ್ಟೇ ನೋವಾದರೂ ತಡೆದುಕೊಂಡೆನಾ? ಅಥವಾ ಅದು ನನ್ನ ದೌರ್ಬಲ್ಯವಾ ಒಂದೂ ಅರ್ಥವಾಗುತ್ತಿಲ್ಲ. ಅರ್ಥವಾಗಿರುವುದು ಇಷ್ಟೇ.. ಈ ಪ್ರೀತಿಗಾಗಿ ಇಷ್ಟು ವರ್ಷಗಳು ಪಾಲಿಸಿಕೊಂಡು ಬಂದಿದ್ದ ಎಷ್ಟೊ ಸಿದ್ದಾಂತಗಳಿಗೆಲ್ಲ ಹೊದಿಕೆ ಹೊದಿಸಿಬಿಟ್ಟು ಆಕೆಗೆ ಸಾಕಷ್ಟು ಸಮಯ ಮೀಸಲಿರಿಸಲು ಒದ್ದಾಡಿದೆ.
ಇಷ್ಟೆಲ್ಲಾ ಒದ್ದಾಟಗಳ ನಡುವೆಯೂ ಇಂದು ಈ ಹಂತದವರೆಗೆ ಬಂದು ಮುಟ್ಟಿದ್ದೇನೆ.

ನಿಮಗಾಗಿ ಹಾಗೂ ನಿಮ್ಮ ನೆನಪಲ್ಲಿ ಮಾಡಬೇಕೆಂದು ನಿರ್ಧರಿಸಿದ್ದ ‘ಹರಿವು’ ಇನ್ನು ಕೆಲವು ಘಂಟೆಗಳಲ್ಲಿ ಮದ್ರಾಸಿನ ಕ್ಯೂಬ್ ಆಫೀಸ್ ಮುಟ್ಟುತ್ತದೆ. ಕಾಕತಾಳೀಯವೋ ಎಂಬಂತೆ ನನ್ನ ಕೈಯಿಂದ ಧನುಶ್ ಕೈಗೆ ಸೌಂಡ್ ಸಿಡಿ ಕೊಟ್ತ ಸಮಯ ನೀವು ಉಸಿರು ತೊರೆದ ಸಮಯ ಆಸುಪಾಸು ಒಂದೇ ಆಗಿತ್ತು.

ನನ್ನಿಂದಲೋ ಅಥವಾ ನನ್ನ ನಿರ್ಧಾರ ಆಯ್ಕೆಗಳಲ್ಲಿದ್ದ ಲೋಪವೋ.. ಅಂದುಕೊಂಡಂತೆ ೨೪ ರಂದು ಮೊದಲ ಪ್ರದರ್ಶನ ಏರ್ಪಡಿಸಲು ಸಾಧ್ಯವಾಗದೇ ಸೋತು ಬಿಟ್ಟೆ.
ಆದರೆ ಇಲ್ಲಿವರೆಗೂ ಬಂದು ತಲುಪುತ್ತದೆ ಎಂಬ ನಂಬಿಕೆಯಿಲ್ಲದೆಯೇ ‘ಹರಿವು’ ಸೆನ್ಸಾರ್ ಆಗುವ ಕೊನೆಯ ಪ್ರಕ್ರಿಯೆಯಲ್ಲಿದೆ.. ಅದಾದರೂ ಅಂದುಕೊಂಡಂತೆ ಪೂರ್ಣಗೊಳ್ಳುವುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕೈಲಾದಷ್ಟೂ ಕೊನೆಯ ಹಂತದವರೆಗೂ ಹೋರಾಡುತ್ತೇನೆ. ಕಾಸೊಂದಿದ್ದರೆ ಇದೆಲ್ಲ ಸಮಯಕ್ಕೆ ಸರಿಯಾಗಿ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈಗದೆಲ್ಲಾ ಚಿಂತಿಸುವಷ್ಟು ಸಮಯ ಉಳಿದಿಲ್ಲ. ಏನಾದರಾಗಲಿ ಈ ‘ಹರಿವು’ ಪೂರ್ಣಗೊಳ್ಲಲೇ ಬೇಕು.

ಇದನ್ನು ಹತ್ತು ಜನರಿಗೆ ತೋರಿಸುವುದರ ಮೂಲಕ ಬರುವ ಪ್ರತಿಕ್ರಿಯೆಗಳಲ್ಲಿ ನಿಮ್ಮ ಇರುವನ್ನು ಶಾಶ್ವತಗೊಳಿಸಬೇಕು ಎಂಬ ನನ್ನ ನಿರ್ಧಾರ ಪೂರ್ಣಗೊಳ್ಳಲೇ ಬೇಕು.. ಹೋರಾಟ ಸಾಗಿದೆ.. ಇದರ ಫಲಿತಾಂಶ ನೀವೆ ನಿರ್ಧರಿಸಿ.. ಅಲ್ಲಿಯವರೆಗೂ ನನ್ನೊಳಗೆ ಇದು ಸೋಲಾ? ಅಥವಾ ಅಂದುಕೊಂಡದ್ದನ್ನು ಸಾಧಿಸಿದೆನಾ ಎಂಬ ಜಿಜ್ಞಾಸೆ ಮುಂದುವರೆಯುತ್ತಲೇ ಇರಲಿ

ಇತೀ ನಿಮ್ಮ
ಬಾಬು/ ನಾನ್ನ