Thursday, August 25, 2011

ನೀವಿಲ್ಲದ ಈ ಒಂದು ವರ್ಷ



ಪಿತಾಜಿ.. ಈಗ ನಾನು ಬ್ಲಾಗ್ ಬರೆಯುತ್ತಿರುವ ಸ್ಥಳದಲ್ಲ್ಲಿ ಒಂದು ವರ್ಷದ ಹಿಂದೆ ಇದೇ ಸಮಯ ಅಂದರೆ ೧೨.೨೦ ನೀವು ನಿಶ್ಚಲವಾಗಿ ಮಲಗಿದ್ದಿರಿ.. ಭೌತಿಕವಾಗಿ ನೀವು ನಮ್ಮ ಜೊತೆಗಿದ್ದಿದ್ದು .. ಮುಂದೇನು ಎಂಬ ಬೃಹತ್ ಎನ್ನಬಹುದಾದ ಸಣ್ಣ ಪ್ರಶ್ನೆ ನನಗೆ ಬೃಹತ್ತಾಗಿ ಕಾಡಿದ್ದಂತ ಸಮಯವದು. ಇನ್ನು ನೀವಿಲ್ಲ ಎಂಬ ಭಾವನೆ ಕಲ್ಪಿಸಿಕೊಳ್ಳುವುದಕ್ಕು ಸಾಧ್ಯವಾಗಿರಲಿಲ್ಲ,, ಮುಂದಿನ ನನ್ನ ಜಾವಾಬ್ದಾರಿ ಏನು..? ಪ್ರಶ್ನೆ.... ಪ್ರಶ್ನೆಯಾಗಿಯಷ್ಟೇ ಉಳಿದಿತ್ತು.. ಎಲ್ಲರೂ ಬರುತ್ತಿದ್ದರು.. ಬಂದವರೊಂದಿಗೆ ಏನು ಮಾತಾಡೋದು.. ಮಾತಾಡಿದವರಲ್ಲಿ ಬಹುತೇಕರಿಗೆ ಕ್ರಿಯಾಕರ್ಮಗಳ ವಿದಿವಿಧಾನಗಳನ್ನು ಸಮರ್ಪಕವಾಗಿ ಪೂರೈಸಿದರೆ ಸಾಕೆಂಬ ಚಿಂತೆ. ಮನುಷ್ಯನ ದೇಹದ ಜೀವವೇ ಹೋದ ಮೇಲೆ ಇನ್ನೆಂತಹ ಕ್ರಿಯಾಕರ್ಮ ಭಾವ ನನ್ನಲ್ಲಿ. ನನಗೆ ನಿಮ್ಮ ಬಗ್ಗೆ ಯಾವ ಭಯವೂ ಇಲ್ಲ.. ನಾನೇಕೆ ತೋರಿಕೆಯ ಕ್ರಿಯಾಕರ್ಮಗಳನ್ನು ನಂಬಿಕೆ ಎಂಬ ಭಯದ ಆಚರಣೆಗಳಲ್ಲಿ ಮಾಡಬೇಕು.. ಅಂದು ನಿಮಗಾಗಿ ಸ್ಥಳ ಆಯ್ಕೆ ಮಾದುವುದಕ್ಕು ನಿಯಮ ನೀತಿ.. ದೊಡ್ಡವರ ತಲೆಗಿಂತ ಮೇಲೆ ನಿವು ಮಲಗಬಾರದಂತೆ.. ಅದು ಇದು.. ಅದಕ್ಕೆಂದೇ ನಿಮ್ಮನ್ನು ಅವರ ದೊಡ್ಡವರಿಗಿಂತ ದೂರದಲ್ಲಿ ಇರಿಸಿದ್ದು.. ಈ ದೊಡ್ಡವರ ಸಹವಾಸ ಸಾಕು ಎಂದು.
ಅಂದು ಇಡೀ ದಿನ ಶೂನ್ಯತೆ.. ಇಂದು ನನ್ನಲ್ಲಿಲ್ಲ.. ಬಹುಶಃ ಕಳೆದ ಒಂದು ವರ್ಷದಲ್ಲಿ ನೀವಿಲ್ಲದೆ ಜೀವನ ಸಾಗಿಸಲು ಕಲಿಯುತ್ತಿದ್ದೇನೆ ಅಂತ ಅನಿಸುತ್ತೆ. ಜೊತೆಗೆ ನನ್ನ ವಯಕ್ತಿಕ ವಿಚಾರವಂತಿಕೆ ಎಷ್ಟೇ ಇದ್ದರು ನನಗೆ ನೀವು ಬಿಟ್ಟು ಹೋದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕೆಂಬ ಕಾರಣವೂ ನಿಮ್ಮನ್ನು ಕಳೆದುಕೊಂಡ ದಿನದಿಂದ ಆವರಿಸಿರುವ ಶೂನ್ಯತೆಯನ್ನು ತಕ್ಕಮಟ್ಟಿಗೆ ದೂರ ಇರಿಸಿರಬಹುದೆಂಬ ನಂಬಿಕೆ ನನ್ನಲ್ಲಿ. ಆದರೆ ಈ ಒಂದು ವರ್ಷದಲ್ಲಿ ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಾಗಲಿಲ್ಲ.
ಈ ಒಂದು ವರ್ಷದಲ್ಲಿ ನೀವಿಲ್ಲವೆಂಬ ಯೋಚನೆಯು ಯೋಚಿಸಿದಂತೆ ಬಿಡುವಾಗಿಸಿತ್ತು , ನನ್ನ ಕೆಲಸಗಳು. ಅದಕೆ ಕಾರಣ ನೀವು ಎಂಬ ನಂಬಿಕೆ ನನ್ನದು.. ಆದರೆ ಪ್ರತಿ ಕೆಲಸದ ಆರಂಭ ಅಂತ್ಯ ನಿಮಗೆ ತಿಳಿಸುವ ಪರಿಪಾಠ ಕಳೆದೈದು ವರ್ಷಗಳಿಂದ ಬೆಳೆದುಬಂದದ್ದರಿಂದಾಗಿ.. ಪ್ರತಿಸಲವೂ ನಿಮ್ಮ ನೆನಪು ಕಾಡುತ್ತಲೆ ಇರುತ್ತದೆ...
ಅಂದು ನಿಮ್ಮ ಮನಸ್ಸಿನ ಗುಣದ ಸಂಕೇತವಾಗಿ ಬೇವಿನ ಗಿಡ ನೆಡುವುದರ ಮೂಲಕ ನಿಮ್ಮನ್ನು ಮತ್ತೆ ಜೀವಂತವಾಗಿಸಿಕೊಂಡೆ.. ಈ ಒಂದು ವರ್ಷ ಕಳೆದದ್ದರ ಸಂಕೇತವಾಗಿ ನಿಮ್ಮ ಮೆಚ್ಚಿನ ನೇರಳೆ ಗಿಡವನ್ನು ನೆಟ್ಟು ನಿಮ್ಮ ನೆನಪುಗಳನ್ನು ಈ ಗಿಡದ ರೂಪದಲ್ಲಿ ನೆಲದಲ್ಲಿ ಹುದುಗಿದ್ದೇನೆ.. ಈ ನೆನಪುಗಳ ಗಿಡ ಮರವಾಗಿ ಸದಾ ನನ್ನ ಜೀವನಕೆ ನೆರಳಾಗುವುದು ಎಂದು ಆಶಿಸುತ್ತಾ, ನಿಮ್ಮ ಆಶೀರ್ವಾದದೊಂದಿಗೆ ಮುಂದೆ ನಾನು ಎದುರಿಸಲು ಹೊರಟಿರುವ ನನ್ನ ಕಲಿಕೆ, ಅನುಭವಗಳಿಗೆ ಸವಾಲೊಡ್ಡುವಂತಹ ಕಾರ್ಯ ಮುಂದುವರೆಸಲು ಹೊರಟಿದ್ದೇನೆ, ನೀವು ಮಾನಸಿಕವಾಗಿ ಸದಾ ನನ್ನೊಂದಿಗೆ ಇರುವಿರಿ ಎಂಬ ನಂಬಿಕೆಯೊಂದಿಗೆ ನಿಮ್ಮ ಮಗ..

ಮಂಜು-ಬಾಬು-ನಾನ್ನ

ಮಂಸೋರೆ.

Wednesday, August 24, 2011

ನಿಮ್ಮ ಕುರಿತೊಂದು ಕವನ ನಿಮ್ಮ ಸ್ನೇಹಿತರಿಂದ

ಪಿತಾಜಿ ಇದು ನಾನು ನಿಮ್ಮ ಮೆಚ್ಚಿನ ಸ್ಥಳವಾದ ವಿಧ್ಯಾಪೀಠದಲ್ಲಿ ಬರೆಯುತ್ತಿರುವ ಬ್ಲಾಗ್ ಇದು.. ಇದು ನಿಮಗೆಷ್ಟು ಇಷ್ಟವಾದ ಸ್ಥಳವಾಗಿತ್ತೋ ಹಾಗೇ ನನಗೆ ಈಗಿದು ನನ್ನ ಜೀವನದಲ್ಲಿ ಮುಖ್ಯ ಸ್ಥಳವಾಗಿದೆ. ಕಾರಣ ಇಂದಿಗೆ ಒಂದು ವರ್ಷವಾಯಿತು ನೀವು ನಿಮ್ಮ ಉಸಿರನ್ನು ಇಲ್ಲಿನ ಗಾಳಿಯಲ್ಲಿ ಲೀನವಾಗಿಸಿ. ನಿಮ್ಮ ಭೌತಿಕ ದೇಹ ನಮ್ಮ ’ಆ’ ಊರಿಗೆ ಹೋದರು ನಿಮ್ಮ ಉಸಿರು ಇಲ್ಲಿನ ಪ್ರತಿ ಕಣದಲೂ ಲೀನವಾಗಿದೆ. ನಿಮಗೆ ನಿಮ್ಮ ಹುಟ್ಟಿದ ಊರಿಗಿಂತಲೂ ಹೆಚ್ಚು ಆತ್ಮೀಯರು ಇರುವಂತ ಸ್ಥಳವಿದು.

ನಿಮ್ಮ ಜೀವನದ ೩೩ ವರ್ಷಗಳು ಕಳೆದಂತ ಸ್ಥಳವಿದು. ಹಾಗಾಗಿ ಇಲ್ಲಿನ ಸುತ್ತಮುತ್ತಲಿನ ಎಲ್ಲರೊಂದಿಗೂ ನಿಮಗೆ ಅಷ್ಟೇ ಆತ್ಮೀಯವಾದ ಒಡನಾಟ ಇಲ್ಲಿದೆ. ಇಲ್ಲಿನ ಜನಗಳ ಮನದಲ್ಲಿ ನಿಮಗಿರುವ ಸ್ಥಾನವನ್ನು ತಿಳಿಯಲು ನಿಮ್ಮ ಸ್ನೇಹಿತರಾದ ಮದಿರೆಪ್ಪನವರು ತಾವೇ ಸ್ವತಃ ರಚಿಸಿ ವಾಚಿಸಿದ ಈ ಕವನ ಸಾಕ್ಷಿ.




Tuesday, August 23, 2011

ನನ್ನ ನಿಮ್ಮ ಕೊನೆಯ ಸಂಭಾಷಣೆ

ಪಿತಾಜಿ ಇದು ನಾನು ನಿಮ್ಮೊಂದಿಗೆ ನಡೆಸಿದ ಕೊನೆಯ ಸಂಭಾಷಣೆ.. ಈ ಸ್ಥಿತಿಯಲ್ಲಿ ನೀವು ಬಹುತೇಕ ವಾಸ್ತವದ ಪ್ರಪಂಚವನ್ನು ಮರೆತು ನಿಮ್ಮದೆ ನೆನಪಿನ ಸುಳಿಗಳಲ್ಲಿ ಕಳೆದು ಹೋಗಿದ್ದಿರಿ. ಅಷ್ಟರಲ್ಲಾಗ್ಲೇ ನನಗೆ ಡಾಕ್ಟರ್ ಮುಂದಿನ ಸಾಧ್ಯತೆಗಳನ್ನು ವಿವರಿಸಿದ್ದರು.. ಆ ದುರ್ಬಲ ಘಳಿಗೆಯಲ್ಲಿ ನಿಮ್ಮ ನೆನಪುಗಳನ್ನು ನನ್ನಲ್ಲಿ ಸಾಧ್ಯವಾದಷ್ಟು ಶೇಖರಿಸಲು ನಾನು ಮಾಡಿಕೊಂಡ ಕೊನೆಯ ಧ್ವನಿ ಮುದ್ರಿಕೆ ಇದು..... ಅಂದು ನನ್ನ ಧ್ವನಿ ಕಂಪಿಸಿದ್ದು ನಾನು ಹೇಗೆ ಮರೆಯಲು ಸಾಧ್ಯ.


Monday, August 22, 2011

ಪಿತಾಜಿ ನೀವು ನನ್ನೊಂದಿಗೆ ಮಾತಾಡಿ ಇಂದಿಗೆ ಒಂದು ವರ್ಷ


ಪಿತಾಜಿ ದಿನಾಂಕದ ಲೆಕ್ಕದಲ್ಲಿ ಹೇಳುವುದಾದರೆ ಇಂದು.. ವಾರದ ಲೆಕ್ಕದಲ್ಲಿ ಹೇಳುವುದಾದರೆ ನಿನ್ನೆಗೆ ನೀವು ನನ್ನ ಜೊತೆ ಮಾತಾಡಿ ಒಂದು ವರ್ಷವಾಯಿತು... ಅಂದು ಭಾನುವಾರ ೨೨ ರ ಆಗಸ್ಟ್ ನೀವು ನನ್ನನ್ನೂ ಸೇರಿಸಿ ಅಕ್ಕ ಅಮ್ಮ ಮತ್ತು ನಿಮ್ಮ ಮೊಮ್ಮಗ ಬಾಬು ಸೋಮ , ಪರಿಚಯದ ಸರೋಜಮ್ಮನವರನ್ನು ಸೇರಿಸಿ ನಮ್ಮೆಲ್ಲರನ್ನು, ನಮ್ಮನ್ನು ನಾವಾಗಿ ಗುರುತಿಸಿ ಮಾತಾಡಿದ್ದು. ಎಲ್ಲರನ್ನು ಕಳಿಸಿದ ನಂತರ ಕೊನೆಯಲ್ಲಿ ಮಧ್ಯಾಹ್ನದ ವಿಸಿಟಿಂಗ್ ಟೈಮಲ್ಲಿ ಕೊನೆಯಲ್ಲಿ ಉಳಿದದ್ದು ನಾನೊಬ್ಬನೆ.. ಇವತ್ತಿಗೂ ನನಗರ್ಥವಾಗದಿರುವಂತದ್ದು ನೀವೇಕೆ ನನ್ನನ್ನು ಬಲವಂತವಾಗಿ ಕಳಿಸಿದ್ರಿ.. ಬಹುಶಃ ಜೀವನ ಪೂರ್ತಿ ನನಗೆ ಈ ಪ್ರಶ್ನೆಗೆ ಉತ್ತರ ಸಿಗಲಾರದೇನೋ..

ನೀವು ನಮ್ಮನ್ನು ಬಿಟ್ಟುಹೋಗಿ ಆಗಲೇ ಒಂದು ವರ್ಷವಾಯಿತಾ ಎಂಬ ಆಶ್ಚರ್ಯ ಒಂದೆಡೆಯಾದರೆ... ನೀವು ಬಿಟ್ಟು ಹೋದ ಜವಾಬ್ದಾರಿಗಳಲ್ಲಿ ಒಂದನ್ನು ಈಡೇರಿಸಲಾಗಲಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಲೆ ಇದೆ. ಈ ಒಂದು ವರ್ಷದಲ್ಲಿ ನಿಮ್ಮೊಂದಿಗೆ ಹೇಳಿಕೊಳ್ಲಲೇ ಬೇಕಾದ ಅದೆಷ್ಟೋ ಖುಷಿಯ ವಿಷಯಗಳು ನನ್ನೊಂದಿಗೆ ಇವೆ. ನೀವಿಲ್ಲದ ಕೊರತೆಯನ್ನು ನಾನು ಅನಿಲ್ ಸರ್ ಹತ್ರ ಹೇಳಿಕೊಳ್ಳುವುದರ ಮೂಲಕ ಒಂದಷ್ಟು ನೀಗಿಸಿಕೊಂಡಿರುವೆನಾದರು.. ನೀವಿಲ್ಲದ ಕೊರತೆ ಕಾಡುತ್ತಲೆ ಇರುವುದು ಅಷ್ಟೇ ಸತ್ಯ.
ನಾನು ನಿಮಗೆ ಮಾತು ಕೊಟ್ಟಂತೆ ಈ ಒಂದು ವರ್ಷದಲ್ಲಿ ನಾನು ನನ್ನ ಸಿನಿಮಾ ಮಾಡಲಾಗಲಿಲ್ಲ.. ನನ್ನನ್ನು ಕ್ಷಮಿಸಿಬಿಡಿ.

Wednesday, May 18, 2011

ಮತ್ತದೇ ನಿರೀಕ್ಷೆ ,

ಪಡೆದೆನೆ..?
ಗೊತ್ತಿಲ್ಲ.. ಆದರೆ
ಅಂದು ನೀ ಬಂದು
ನನ್ನ ಸನಿಹದಲ್ಲಿ ಕುಂತಾಗ
ಎಷ್ಟೋ ವರ್ಷಗಳ
ಹುಡುಕಾಟ
ಅಂತ್ಯವಾಗಲಿದೆಯೋ ಎಂಬ
ಆಸೆ ಮನದಲಿ ಚಿಗುರೊಡೆಯಿತು.
ಮನಸ್ಸೆಂಬ ಮರ್ಕಟದ
ಬೇಲಿಯೊಳಗೆ
ಸಿಲುಕುಬಾರದೆಂಬ ನಿಲುವಿಗೆ
ಎಷ್ಟೇ ಪ್ರಯತ್ನಿಸಿದರೂ,
ನಿನ್ನ ಕಂಡ
ಆ ದಿನದಿಂದ
ಮರೆಯಲೆತ್ನಿಸಿದರೂ
ಮರೆಯಲಾಗುತ್ತಿಲ್ಲ ಎನಗೆ.
ನಿ ಎನ್ನ ಸ್ನೇಹದ
ಹಸ್ತವ ತಿರಸ್ಕರಿಸಿದಾಗೆಲ್ಲ
ನಿರ್ಧರಿಸುವೆ
ಮತ್ತೆಂದು ತೊಂದರೆ ಕೊಡಬಾರದೆಂದು,
ಮರು ಘಳಿಗೆಗೆ
ನಿನ್ನೊಲುಮೆಯ ಪಡೆಯಲು
ಹಾತೊರೆಯುತ್ತದೆ,
ಸ್ನೇಹದ ಹಸ್ತವ ನಿನ್ನೆಡೆಗೆ ಚಾಚುತ್ತೇನೆ.
ಮತ್ತದೇ ನಿರೀಕ್ಷೆ ,ಕಾತರದೊಂದಿಗೆ
ನಿನ್ನಯ
ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ.

ಮಂಸೋರೆ.

Friday, April 29, 2011

ಇಂದು ನನ್ನ ಜನ್ಮದಿನ. ನಿಮ್ಮನ್ನು ಮರೆಯಲಾಗದ ದಿನ.
































ಬದುಕು ಜಟಕಾ ಬಂದಿ ವಿಧಿ ಅದರ ಸಾಹೇಬ...
ಆ ಕೊನೆಯ ಕ್ಷಣದಲ್ಲಿ ನಿಮಗೆ ಈ ಹಾಡೇ ಕೇಳಿಸಬೇಕೆಂದು ನನಗೆ ಅನಿಸಿದ್ದೇಕೆ????

ಇಂದು ಏಪ್ರಿಲ್ ೩೦

ಪಿತಾಜಿ...
ಹೋದ ವರ್ಷ ಇದೇ ದಿನ.. ಬೆಳ್ಬೆಳ್ಗೇನೆ ಕಾಲ್ ಮಾಡಿ ವಿಶ್ ಮಾಡಿದ್ರಿ... ಜೊತೆಗೆ ನಾನು ಹೇಳಿದಂತೆ.. ೧೦.೪೫ ಗು ಕಾಲ್ ಮಾಡಿ ವಿಶ್ ಮಾಡಿದ್ರಿ... happy birthday sir.. ಅಂತ.. ಜೊತೆಗೆ ದೇವಸ್ಥಾನಕ್ಕು ಹೋಗ್ಬಾ ಅಂತ ಹೇಳಿದ್ರಿ... ನನಗೆ ದೇವಸ್ಥಾನ ಅಂದ್ರೆ ಇಷ್ಟ ಆಗೋದಿಲ್ಲ ಅಂತ ಗೊತ್ತಿದ್ರು ರಿಕ್ವೆಸ್ಟ್ ಮಾಡ್ಕೊಂಡ್ರಿ... ಆದ್ರೆ ನಾನು ಹೋಗಲಿಲ್ಲ.. ಜೊತೆಗೆ ಹೋದ ವರ್ಷ ನಾನು ಸಿಕ್ಕಿಹಾಕ್ಕೊಂಡಿದ್ದ ಸುಳಿ ಕೂಡ ನನಗೆ ಹೋಗಲು ಬಿಡಲಿಲ್ಲವೆನೋ ನೆನಪಿಲ್ಲ.

ಹೋದ ವರ್ಷ ಅಂತಲ್ಲ ನಾನು ಮೊಬೈಲ್ ತಗೊಂದ ಮೇಲೆ ಒಂದು ವರ್ಷವೂ ನಿಮ್ಮೊಂದಿಗೆ ನಾನು ನನ್ನ birthday celebrate ಮಾಡ್ಕೊಳ್ದಿದ್ರು.. ನೀವು ಮಾತ್ರ ತಪ್ಪದೆ ಕಾಲ್ ಮಾಡಿ ವಿಶ್ ಮಾಡ್ತಿದ್ರಿ.
ಕಳೆದ ಕೆಲವು ವರ್ಷಗಳಿಂದ ನಾನು ನನ್ನ ಹುಟ್ಟಿದ ದಿನವನ್ನು ಸೆಲೆಬ್ರೇಟ್ ಮಾಡ್ಕೊಳ್ಲೋದು ಬಿಟ್ಟಿದ್ರುನು.. ನೀವ್ ವಿಶ್ ಮಾಡೋವರೆಗು ಕಾಯ್ತಿದ್ನೆ ಹೊರತು ನನಗೆ ನಾನು ದೊಡ್ದವನಾಗಿದ್ದೀನಿ ನನ್ನ ಜವಾಬ್ದಾರಿಗಳ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡ್ಬೇಕು ಅಂತ ಅನಿಸಿದ್ದೇ ಇಲ್ಲ..
ಅದಕ್ಕೆ ಕಾರಣ ನೀವು.. ನೀವು ಯಾವತ್ತು ನನಗೆ ಜವಾಬ್ದಾರಿಗಳ ಟೆನ್ಷನ್ ಕೊದಲೇ ಇಲ್ಲ..
ಎಲ್ಲವನ್ನು ನಿವೆ ನಿಭಾಯಿಸ್ತಿದ್ರಿ.. ಜೊತೆಗೆ ನನಗೆ ಏನೇ ಕಷ್ಟ ಬಂದ್ರು.. ನೀನ್ಯಾಕೆ ತಲೆಕೆಡಿಸ್ಕೊಳ್ತೀಯಾ ನಾನಿದೀನಲ್ಲ ಅಂತ ಹೇಳ್ತಿದ್ರಿ.. ಜೊತೆಗೆ ನನ್ನೆಲ್ಲ ಕೆಲಸಗಳಿಗೆ ಬ್ಯಾಕ್ ಬೋನ್ ಆಗಿ.. ನಾನು ನನ್ನದೆ ಆದ ಕನಸುಗಳ ಲೋಕದಲ್ಲಿ ಕಾಣುತ್ತಿದ್ದ ಗುರಿಗಳನ್ನು ಮುಟ್ಟಲು ಸಹಕರಿಸುತ್ತಿದ್ರಿ.
೨೦೦೪ ರಿಂದ ಸತತವಾಗಿ ೨೦೧೦ ರವರೆಗೆ ನಾನಾಗಿ ಫೋನ್ ಸ್ವಿಚ್ ಆಫ್ ಮಾಡ್ಕೊಂಡು ನಿಮಗೆ ಕಾಲ್ ಮಾಡ್ದಾಗ ಸಿಗದಿದ್ದ ಹೊರತು ನೀವೆಂದೂ ನನಗೆ ಫೋನ್ ಮಾಡೋದನ್ನ ತಪ್ಪಿಸಲಿಲ್ಲ. ನೀವು ಹಿಂದೆಲ್ಲಾ ಹಾಸ್ಪಿಟಲ್ನಲ್ಲಿ ಇದ್ದಾಗ ಕೂಡ.. ನಾನು ಬರೋದು ಸ್ವಲ್ಪ ತಡ ಆದ್ರು ಸಿಡುಕ್ತಿದ್ರಿ.. ಆದ್ರೆ ಈಬಾರಿ ಅದೇನೂ ಮಾಡಲಿಲ್ಲ.. ನಾನು ಬಂದಾಗಲು ಊರಿಗೆ ಹೊರ‍ಡೋಣ ಅಂತಿದ್ರಿ.. ಅಥವ ನಿನ್ನ ಕೆಲಸಗಳು ಏನಾದ್ರು ಇದ್ರೆ ನೋಡ್ಕೋಹೋಗು ನಾನು ಆರಾಮಾಗಿದ್ದೀನಿ ಅಂತಲೇ ಹೇಳಿದ್ರಿ. ಮೊದಲೆಲ್ಲ ನಾನು ನಿಮ್ಮನ್ನು ನೋಡಲು ಬಂದಾಗ ಇನ್ನೂ ಸ್ವಲ್ಪ ಹೊತ್ತು ಕೂತ್ಕೋ ಅಂತಿದ್ದೋರು ಈಬಾರಿ ಹೋಗು ಹೊರಟೋಗು ಅಂತ ಬಲವಂತವಾಗಿ ಕಳಿಸ್ಬಿಟ್ರಿ.. ಅದರಲ್ಲು ನನಗೆ ಈಗಲು ಕಾಡುತ್ತಿರುವ ಘಟನೆ ಹಾಸ್ಪಿಟಲ್ನಲ್ಲಿ ಕೊನೆಯಬಾರಿ ನನ್ನನ್ನು ನಾನಾಗಿ ಗುರುತಿಸಿ ಮಾತಾಡಿಸಿದ ದಿನವಂತೂ ಅಲ್ಲಿಗೆ ಬಂದಿದ್ದ ನಿಮ್ಮ ಮೊಮ್ಮಗನೊಂದಿಗೆ ಚೆನ್ನಾಗಿ ಮಾತಾಡಿದ್ರಿ.. ಕಂಚೇಪಲ್ಲಿಯ ಸರೋಜಮ್ಮನವರೊಂದಿಗೆ ಕೂಡ ಚೆನ್ನಾಗಿ ಮಾತಾಡಿದ್ರಿ.. ಅವರನ್ನು ಬಿಟ್ಟು ಒಳಬಂದಾಗ ನನ್ನೊಂದಿಗೆ ಮಾತಾಡದೆ ನನ್ನನ್ನು ಬಲವಂತವಾಗಿ ಕಳಿಸಿದ್ದೇಕೆ? ನಿಮ್ಮ ಪಥ್ಯದ ವಿಷಯದಲ್ಲಿ ತುಂಬ ಕ್ರೂರವಾಗಿ ನಡೆದುಕೊಂಡೆ ಅಂತಲಾ? ಅಥವ ನಿಮಗೆ ಸರಿಯಾದ ಸಮಯಕ್ಕೆ ನಿಮಗೆ ಟ್ರೀಟ್ಮೆಂಟ್ ಕೊಡಿಸದೆ ಉದಾಸೀನ ಮಾಡಿದೆ ಅಂತಲಾ? ಯಾಕೆ? ನನಗೆ ನನ್ನ ಜೀವನದ ಕೊನೆ ಕ್ಷಣದವರೆಗೂ ಈ ಪ್ರಶ್ನೆ ಕಾಡುತ್ತಲೇ ಇರುತ್ತದೆ.
ಅದರ ಮಾರನೆಯ ದಿನ ನಿವು ನನ್ನನ್ನು ಇನ್ಯಾರೊ ಎಂಬಂತೆ ಗುರುತಿಸಿ ಮಾತಾಡಿಸಿದ್ದನ್ನು ರೆಕಾರ್ಡ್ ಮಾಡ್ಕೊಂಡಿರೊದನ್ನು ಕೇಳಿದ ಪ್ರತಿ ಸಲವೂ ಈ ಪ್ರಶ್ನೆ ನನಗೆ ಕಾಡುತ್ತಲೇ ಇರುತ್ತದೆ.
ನೀವು ನಿಮ್ಮ ಆರೊಗ್ಯ ಹದಗೆಡಲು ಪ್ರಾರಂಭಿಸಿದಂದಿನಿಂದ ನನಗೆ ಪ್ರೇರಕರಾಗಿ, ಸ್ನೇಹಿತನಾಗಿ, ಮಾರ್ಗದರ್ಶಿಯಾಗಿ, ಗುರುವಾಗಿ... ಒಟ್ಟಾರೆ ನನಗೆ ನನ್ನ ಎಲ್ಲವೂ ಆಗಿ ನನಗಾಗಿ ನಿಮ್ಮನ್ನು ಮುಡುಪಿಟ್ಟುಕೊಂಡ್ರಿ.. ಆದ್ರೆ ಯಾವತ್ತು ನನ್ನನ್ನು ನಿಮಗೆ ಬೇಕಾದಮ್ತೆ ಬದಲಿಸಲು ಪ್ರಯತ್ನಿಸಲಿಲ್ಲ.. ನನ್ನ ಕನಸುಗಳಿಗೆ ನೀರು ಹಾಕಿ ಬೆಳೆಸುವುದರಲ್ಲೇ ಕೊನೆಯವರೆಗೂ ನಿಮ್ಮನ್ನು ಅರ್ಪಿಸಿಕೊಂಡ್ರಿ.. ಆದರೆ ನಿಮ್ಮ ಮಗನಾಗಿ ನಾನು ನಿಮಗಾಗಿ ಏನೂ ಮಾಡಲಾಗಲಿಲ್ಲ.. ನನ್ನ ಕನಸುಗಳು ನನಸಾಗುವ ಮೊದಲೆ ನೀವು ನನ್ನ್ನಿಂದ ದೂರ ಹೋಗ್ಬಿಟ್ರಿ.. ನೀವು ತೀರಿಕೊಂಡ ದಿನ ಅತ್ತಾಗ ನನ್ನೆದುರಿಗೆ ನಿಮ್ಮ ಭೌತಿಕ ದೇಹ ನನ್ನನ್ನು ಬಿಟ್ಟು ಹೋಯಿತು.. ಹಾಗೆ ನನ್ನೊಳಗಿನ ನಿಮ್ಮ ನೆನಪುಗಳನ್ನು ಹೀಗೆ ಬ್ಲಾಗಿನಲ್ಲಿ ಹಂಚಿಕೊಂಡರೆ ನನ್ನೊಳಗಿನ ನೆನಪುಗಳು ದೂರವಾಗುತ್ತೇನೋ ಎಂಬ ಭಯದಿಂದಾಗಿ ಇಷ್ಟು ದಿನ ಇಲ್ಲಿ ದಾಖಲಿಸಲು ಹಿಂದೇಟೂ ಹಾಕುತ್ತಿದ್ದೆ.
ಆದರೆ ಇಂದೇಕೋ ಹಾಗೆ ಅನಿಸದೆ.. ನಿಮ್ಮ ನೆನಪುಗಳನ್ನು ಇಲ್ಲಿ ದಾಖಲಿಸುತ್ತಾ ಹೋದಷ್ಟು ನಿಮ್ಮ ನೆನಪುಗಳು ಇನ್ನೂ ಆಳವಾಗಿ ನನ್ನೊಳಗೆ ಆವರಿಸಿಕೊಳ್ಳುತ್ತಿದೆ ಅಂತನಿಸುತ್ತಿದೆ.
ನನ್ನ ಅಸ್ತಿತ್ವವೇ ನೀವಾಗಿರುವಾಗ ನಿಮ್ಮ ನೆನಪುಗಳನ್ನು ಇದಿಷ್ಟರಲ್ಲೇ ದಾಖಲಿಸಲು ಸಾಧ್ಯವಾಗುವುದಿಲ್ಲವಲ್ಲ.
ಭಾವನಾತ್ಮಕವಾಗಿಯಷ್ಟೇ ಅಲ್ಲದೆ ನಿಜವಾಗಿಯೂ ನೀವು ನನ್ನೊಂದಿಗೇ ಇದೀರಿ ಅನ್ನೋದು ಒಂದೆರೆಡು ಘಟನೆಗಳ ಮೂಲಕ ಅನುಭವಕ್ಕೆ ಬಂದಾಗಿದೆ. ನಿಮ್ಮ ನೆನಪುಗಳೊಂದಿಗೆ ನಿಮಗೆ ನಾನು ಮಾತು ಕೊಟ್ಟಿದ್ದ ಕನಸುಗಳನ್ನು ಈಡೇರಿಸಲು ನಿಮ್ಮ ಆಶಿರ್ವಾದ ಬೇಡುತ್ತಾ ನನ್ನ ಜನ್ಮದಿನದ ಈ ದಿನವನ್ನು ಆರಂಭಿಸುತ್ತಿದ್ದೇನೆ.

ನಿಮ್ಮ ಮಗ
ಬಾಬು- ಮಂಜುನಾಥ್- ನಾನ್ನ