Thursday, December 6, 2012

ಜೀವ ಜಲ ಬತ್ತಿ ಎದೆ ಹಾಲು ಸೊರಗಿರಲು


ಸುರಿಯುವ ಮಳೆ
ನಿನ್ನೊಡಲ ಬರವ
ನೀಗುವುದೇ?
ಎಷ್ಟು ವರ್ಷಗಳಾಯಿತು
ನಿನ್ನೊಡಲ ಜೀವ ಸೆಲೆ
ಮೈದುಂಬಿ ಹರಿದು,
ದೇಹ ಹಸಿರ ಸೀರೆ ಉಟ್ಟು,
ನಿನ್ನ ಮಗುವಿನಾ
ಮೊಗವು ಆನಂದದೀ
ನಲಿದು..
ಎಷ್ಟು ವರ್ಷಗಳಾಯಿತು?
ಹಸಿರ ಸೀರೆ ಹರಿದು
ಕಿತ್ತು , ಬಿರುಕೊಡೆದ
ನೆಲ ಬೆತ್ತಲಾಗಿ,
ನಿನ್ನ ನರನಾಡಿಗಳಲಿ
ಜೀವ ಜಲ ಬತ್ತಿ
ಎದೆ ಹಾಲು ಸೊರಗಿರಲು..
ಬದುಕಲೇ ಬೇಕಾದ
ಅನಿವಾರ್ಯತೆಗೆ
ನಿನ್ನ ಮಕ್ಕಳು
ಹಾಕಿಹರು
ದೇಹದ ಮೇಲೆಲ್ಲಾ
ಸಾವಿರಾರು ಅಡಿಗಳವರೆಗೆ
ಲಕ್ಷಾಂತರ ತೂತುಗಳನ್ನು.
ಆ ಕಾಲಕೆ ಚಿನ್ನದಾ ಹೊಳೆ ಹರಿಸಿ
ಇಡೀ ನಾಡಿಗೆ
ಹೆಮ್ಮೆಯಾಗಿದ್ದ ನೀನು,
ಇಂದು ಬರೀ ದೂಳು,
ಗಾಯಗಳ ಹೊತ್ತು,
ಹನಿ ನೀರಿಗಾಗಿ
ಹಂಬಲಿಸುತ್ತಿರುವೆ,
ನಿನ್ನ ಕಣ್ಣಾಲಿಗಳಿಗೆ
ಹನಿ ನೀರು ಸುರಿಸಲಾಗುತ್ತಿಲ್ಲ.
ಕವಿ ಪುಂಗವರ
ಪದಗಳಲ್ಲಿ ಹಾಡಿ ಹೊಗಳಲ್ಪಟ್ಟ
ನಿನ್ನ ಗತಿ ಯಾರಿಗೂ
ಕಾಣದಂತಾಯ್ತಲ್ಲ..

-ಮಂಸೋರೆ

ಗೊಂದಲದ ಗೂಡು

ಸೋಮಾರಿತನವೋ ಅಥವ ಬೇಸರವೋ ಗೊತ್ತಿಲ್ಲ ಬ್ಲಾಗ್ ಬರೆಯೋದಿಕ್ಕೆ ಮೊದಲಿನಂತೆ ಆಸಕ್ತಿ ಉಳಿದಿಲ್ಲ. ಜೀವನದ ಪ್ರಮುಖ ಘಟ್ಟನಗಳನ್ನು ಹೊರತುಪಡಿಸಿ ಇನ್ನೇನನ್ನೂ ದಾಖಲಿಸುವ ಮನಸ್ಸಾಗುತ್ತಿಲ್ಲ ಎಂಬ ಚಿಂತೆಯಲ್ಲೇ ಹಲವು ದಿನಗಳ ನಂತರ ಬ್ಲಾಗ್ ಬರೆಯಲು ತೊಡಗಿದ್ದೇನೆ.

ಹೇಗಿದ್ದೆ .... ಹೇಗಾದೆ? ಯಾವುದೇ ದೂರದೃಷ್ಟಿ ಇಲ್ಲದೆ ಆರಂಭಿಸಿದ ಪಯಣ ಇಂದು ಎಲ್ಲೋ ಸಾಗುತ್ತಿದೆ. ನಾನ್ಯವತ್ತು ಮುಂದೆ ಇಂತಹದ್ದೇ ಜೀವನ ನಡೆಸಬೇಕೆಂಬ ಆದರ್ಶಗಳನ್ನು ಕಟ್ಟಿಕೊಂಡವನಲ್ಲ. ಗಾಳಿ ತೂರಿದ ಕಡೆಗೆ ಸಾಗುತ್ತಾ ಬಂದೆ. ಆದರೆ ಅಪ್ಪನ ಸಾವು ಇಂತಹ ಅನಿರ್ಧಿಷ್ಟತೆಗೆ ಬ್ರೇಕ್ ಹಾಕಿತು.

ಎರಡು ವರ್ಷದ ಡಿಗ್ರಿ ಮುಗಿಸಲು ಬೆಂಗಳೂರಿಗೆ ಬಂದವನು ಇಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತ ಸಾಗಿದ್ದೇನೆ. ಅಂದು ಕಲಾವಿದನಾಗಬೇಕೆಂದು ಬಯಸಿದವನು ಇಂದು ಕಲೆಯನ್ನು ಮೂಟೆಕಟ್ಟಿ ಬರವಣಿಗೆಯಲ್ಲಿ ಮುಳುಗಿದ್ದೇನೆ. ಇಲ್ಲಿಯವರೆಗೂ ಸಾಗಿದ ಪಯಣದಲ್ಲಿ ಏನೇನೆಲ್ಲ ಮಾಡಿದ್ದಾಯ್ತು.. ಆದ್ರೂ ಇನ್ನೂ ಏನೋ ಮಾಡಬೇಕೆಂಬ ತವಕ ಕಾಡುತ್ತಲೇ ಇದೆ. ಅದು ಮಾಡಬೇಕೆಂಬ ತವಕವಷ್ಟೇ ಹೊರತು ಅದರಲ್ಲೇ ಜೀವನ ಸಾಗಬೇಕೆಂಬ ಹಂಬಲ ಇಲ್ಲದಿರುವುದು ಸರೀನಾ ತಪ್ಪಾ ಎಂಬ ಜಿಜ್ಞಾಸೆಯೇ ಮತ್ತಷ್ಟು ಖಿನ್ನತೆ ಮೂಡಿಸುತ್ತಿದೆ.

ಜೀವನದಲ್ಲಿ ಕೆಲವೊಮ್ಮೆ ತೆಗೆದುಕೊಳ್ಳುವ ಆತುರ ನಿರ್ಣಯಗಳಿಂದ ನರುಳುವುದೂ ಕಡಿಮೆ ಆಗಿಲ್ಲ. ಅದರ ಫಲಿತ ಅನುಭವಿಸುತ್ತಲೆ ಇದ್ದೇನೆ. ಅಪ್ಪನ ಸಾವಿನಿಂದಾಗಿ ಕೆಲವೊಂದು ಸೀಮಿತ ಜವಾಬ್ದಾರಿಗಳನ್ನು ಆದಷ್ಟು ಬೇಗ ಪೂರ್ತಿ ಮಾಡಿ ನನ್ನ ಕನಸುಗಳೆಡೆಗೆ ಸಾಗೋಣ ಅಂತ ಪ್ರಯತ್ನಿಸಿ ಕೊನೆಗೆ ಏನೂ ಮಾಡಲಾಗದೆ ಸೋತ ಹೇಡಿಯಂತೆ ಪತ್ರಿಕೋದ್ಯಮದಲ್ಲಿ ಕಾಲ ತಳ್ಳುತ್ತಿದ್ದೆನೆ. ನಾನೇ ಹುಟ್ಟು ಹಾಕಿಕೊಂಡ ಸಮಸ್ಯೆಗಳನ್ನು ಬಗೆಹರಿಸಲಾಗದೆ, ಚಿಂತೆಗಳಲ್ಲಿ ನರಳುತ್ತಾ ಕಾಲ ತಳ್ಳುತ್ತಿದ್ದೇನೆ.
‘ಛೇ ಬೇಕಿತ್ತಾ ನನಗೆ ಇದೆಲ್ಲಾ? ನಾನು ಯಾಕೆ ಎಲ್ಲರಂತೆ ಓದು ಮುಗಿಸಿದ ತಕ್ಷಣ ಕೆಲಸಕ್ಕೆ ಸೇರ್ಕೊಳ್ಳಿಲ್ಲ. ಸೇರಿದ್ರೆ ಇಷ್ಟೊತ್ತಿಗೆ ಯಾವ ಸಮಸ್ಯೆಯೂ ಇಲ್ಲದೆ ಆರಾಮಾಗಿರಬಹುದಿತ್ತಲ್ಲ’ ಎಂದು ಕೊರಗುವುದೇ ಹೆಚ್ಚಾಗಿದೆ. ಎಂದಿಗೂ ನನ್ನ ಸಮಸ್ಯೆಗಳು ಬಗೆಹರಿಯುವುದೇ ಇಲ್ಲವೆ? ನನ್ನ ಜೀವನದ ಅನುಭವಗಳಿಂದ ಕಂಡ ಕನಸುಗಳನ್ನು ಎಂದಿಗೂ ನೆರವೇರಿಸಲಾಗುವುದೇ ಇಲ್ಲವೇ?  ಪ್ರಶ್ನೆಗಳು ಮತ್ತಷ್ಟು ಪ್ರಶ್ನೆಗಳನ್ನು ಸೃಷ್ಟಿಸುತ್ತಿವೆ. ಮನಸ್ಸು ಮತ್ತಷ್ಟು ಗೊಂದಲದ ಗೂಡಾಗುತ್ತಿದೆ. ಇದೆಲ್ಲವುದರ ಮಧ್ಯೆ ಮತೊಂದೆಡೆ ಕೆಲಸಕ್ಕೆ ತಯಾರಿ ನಡೆಸಿದ್ದೇನೆ. ಅದರ ಫಲಿತಾಂಶ ಏನಾಗುತ್ತೋ ನೋಡಬೇಕು..

ಎಂತ ವೇಸ್ಟ್ ಜೀವನ ನಂದು......