Monday, November 23, 2009

ಸ್ನಿಗ್ಧ ನಗೆಯ... ಮುದ್ದು ಮುಖದ ಹುಡುಗಿ..

ಮೈಸೂರಿನ ರೈಲು ನಿಲ್ದಾಣ....
ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮಾಡಬಹುದು... ಅನ್ನೋ ಯೋಚನೆಯಲ್ಲಿ.
ಅಂತೂ ಸಿಕ್ತು.....
ಕುಂತ್ ತಕ್ಷಣ ಕಿವಿಗೆ ಹಿಯರ್ ಫೋನ್ ಹಾಕ್ಕೋಂಡ್ ಕಿಟಕಿಯೊಳಗಿಂದ ಪ್ಲಾಟ್ ಫಾರಂ ಮೇಲಿರುವರನ್ನೆಲ್ಲಾ ನೋಡ್ತಾ ಇದ್ದಾಗ ಯಾರೊ ಕರೆದಂತಾಯ್ತು... ಹಿಂದೆ ತಿರುಗಿ ನೋಡ್ದೆ..
೪೦ ರ ಆಸುಪಾಸಿನ ಇಂದಿನ ಆಧುನಿಕ ಮಹಿಳೆ...(ಆಧುನಿಕ ಯಾಕೆ ಅಂತಂದ್ರೆ ೪೦ ರ ವಯಸ್ಸಿನ ಮಹಿಳೆ ಚೂಡಿದಾರ್ ಹಾಕಿರೋದ್ರಿಂದ ನನಗೆ ಮಾಡ್ರನ್ ಅನಿಸಿರಬೇಕು)
ರಿನನ್ದ್ಬ್ಫ಼್ಬ್ಸಾಬಸ್ದ್....ಚಕ್ಜ್ದಹಸ್ಜಹ್ಜ್ಕ್ದಸ್ಧಚ್ವ್....
ಸರಿಯಾಗಿ ಕೇಳಿಸಲಿಲ್ಲ
ಕಿವಿಯಲ್ಲಿದ್ದ ಇಯರ್ಫೋನ್ ತೆಗೆದೆ...
ರಿಸರ್ವೇಶನ್ ಇಲ್ದೇ ಇದ್ರು ಇಲ್ಲಿ ಕುತ್ಕೋಬಹುದಾ....
ಬೆಂಗಳೂರ್ ವರೆಗೂ ಕುತ್ಕೋಬಹುದು..
ಹಾಗಾದ್ರೆ ಓಕೆ.. ನಾವ್ ಮದ್ದೂರು ಇಳ್ಕಂತೀವಿ...
ಆ ಕಡೆಯಿಂದ ಒಂದು :)
ನಾನೂ ಒಂದ್ :) ಕೊಟ್ಟೆ.
ಆಕೆ ಮಗಳನ್ನು ಕರೆದು( ಬಹುಶಃ ಆಕೆ ಇನ್ನೊಂದು ಕಡೆ ಕಿಟಕಿಯನ್ನು ಹುಡುಕುತ್ತಿದ್ದಳೇನೋ) ನನ್ನ ಮುಂದೆ ಕೂರಿಸಿ ತಾನು ಪಕ್ಕ ಕೂತಳು.
ನಾನು ಮತ್ತೆ ಸಂಗೀತ ಲೋಕದಲ್ಲಿ ಮುಳುಗಿಹೋದೆ...
೦೮.೧೫
ಟ್ರೈನ್ ಹೊರಡಲು ಶುರುವಾಯ್ತು...
ಪ್ಲಾಟ್ಫಾರಂ ಮರೆಯಾಗುತ್ತಿದ್ದಂತೆ ಕಿಟಕಿಯ ಪಕ್ಕ ಅಂಧಕಾರ ಆವರಿಸಿಕೊಳ್ಳತೊಡಗಿತು... ದೂರದಲ್ಲಿ ಲೈಟ್ಸ್ ಮಿಂಚಿ ಮರೆಯಾಗುತ್ತಿದ್ದವು.
ಇನ್ನಷ್ಟು ದೂರ ಹೋಗುತ್ತಿದ್ದಂತೆ ರೈಲಿನ ವೇಗ ಹೆಚ್ಚಾದಂತೆ ಗಾಳಿಯು ಜೋರಾಗಿ ಕಿಟಕಿಯೊಳಗಿಂದ ಒಳ ನುಗ್ಗತೊಡಗಿತು...
ಆ ಗಾಳಿಗೆ ಆಕೆಯ ಮುಂಗುರುಳು ಆಕೆಯ ಮುದ್ದು ಮುಖದೊಂದಿಗೆ ಆಟವಾಡತೊಡಗಿತು... ಮೊದ ಮೊದಲು ಮುಂಗುರುಳ ತುಂಟಾಟವನ್ನು ತೋರು ಬೆರಳನಿಂದ ಹಿಂದಕ್ಕೆ ತಳ್ಳುತ್ತಿದ್ದವಳು.. ಇನ್ನು ಆಗದು ಎಂಬಂತೆ ಮುಂಗುರಳನ್ನು ಹಿಂದಕ್ಕೆ ಎಳೆದು ಕೂದಲಿನೊಂದಿಗೆ ಗಟ್ಟಿಯಾಗಿ ಬಿಗಿದು ಗಂಟಾಕಿದಳು. ತನ್ನಾಟ ಇನ್ನು ಸಾಗದಂತೆ ಮಾಡಿದ.. ಆ ಟ್ರೈನ್ ಡ್ರೈವರ್ ನನ್ನು ಶಪಿಸುತ್ತಾ.. ಅಲ್ಲಿಯವರೆಗು ತಾನು ಸವಿದ, ಸವರಿದ ಆ ಮುದ್ದು ಮುಖವನ್ನು ನೆನೆಯುತ್ತಾ ಮುಂಗುರುಳು ಆ ಗಂಟಿನೊಳಗೆ ಮುದುಡಿ ಮಲಗಿತು.
ಆಕೆ ಕೂದಲನ್ನು ಗಂಟಾಕುವಾಗ ಕಂಡಿತು ಮುದ್ದು ಮುಖದ, ಸ್ನಿಗ್ದ ನಗುವಿನ ಆಕೆಯ ಮುಖ... ನನ್ನ ಹಿಂದಿನ ಗರ್ಲ್ ಫ್ರೆಂಡ್ಸ್ ರಷ್ಟು ಆಕರ್ಶಕವಲ್ಲದಿದ್ದರು. ವಿಶೇಷವಾಗಿ ಕಂಡಳು...
ಅಂಗೈ ಚಡಪಡಿಸತೊಡಗಿತು...
ಏನೋ ಕಳೆದು ಹೋದದ್ದನ್ನು ಹುಡುಕುವಂತೆ... ಮರೆತುಹೋದದ್ದನ್ನು ನೆನೆಪಿಸಿಕೊಳ್ಳುವಂತಿತ್ತು ಆ ಚಡಪಡಿಕೆ... ನನಗೆ ಗೊತ್ತಿಲ್ಲದಂತೆ ಕೈ ಬ್ಯಾಗ್ ಕಡೆಗೋಯ್ತು... ಬ್ಯಾಗಲ್ಲಿ ಏನೋ ಹುಡುಕತೊಡಗಿತು
ಏನು..?
.....?
ಆ ಸಿಕ್ತು ... ಸ್ಕೆಚ್ ಬುಕ್...
ಹೌದು ಟ್ರೈನ್ ಪ್ರಯಾಣ ಕಡಿಮೆ ಆದದ್ದೇ ಪ್ರಯಾಣದಲ್ಲಿ ಡ್ರಾಯಿಂಗ್ ಮಾಡೋ ಅಭ್ಯಾಸವೇ ಬಿಟ್ಟೋಗಿತ್ತು...
ನೆನಪಿಸಿಕೊಂಡು ಕೊನೆಯದಾಗಿ ಯಾವಾಗ ಮಾಡಿದ್ದು..
ಹೌದು.. ಮೂರು ವರ್ಷಗಳ ಹಿಂದೆ ದೆಹಲಿಗೆ ಹೋದಾಗ ಮಾಡಿದ್ದೇ ಮತ್ತೆ ಮಾಡೇ ಇಲ್ಲ...
ಅಷ್ಟೊತ್ತಿಗೆ ಸ್ಕೆಚ್ ಬುಕ್ .. ಪೆನ್ ಕೈಗೆ ಬಂದಾಗಿತ್ತು.
ಮೊದಲೆಲ್ಲ ಮುಂದೆ ಯಾರೇ ಕುಂತಿರ್ಲಿ.. ಮುಲಾಜಿಲ್ಲದೆ ಅವರ ಡ್ರಾಯಿಂಗ್ ಮಾಡ್ತಾ ಇದ್ದೆ...
ಅವ್ರ ಪರ್ಮೀಶನ್ ಇರ್ಲಿ ಇಲ್ದೇ ಇರ್ಲಿ....
ಆದ್ರೆ ಇವತ್ತ್ಯಾಕೋ ಆಗ್ತಾ ಇಲ್ಲ..
ಏನ್ ಮಾಡ್ಲಿ...
ಸರಿ ಸುಮ್ನೆ ಡ್ರಾಯಿಂಗ್ ಮಾಡೋಣ... ಹಂಗಾದ್ರು ಆ ಹುಡುಗೀನ impress ಮಾಡೋಣ...
ಉಹುಂ..
ಆ ಹುಡುಗೀ ಮುಖಾನೆ ಬರ್ತಾ ಇದೆ...
ಅವ್ರಮ್ಮ ನೋಡಿ ಗಲಾಟೇ ಮಾಡಿದ್ರೆ... ಆ ಮುಖಾನ ಹಾಗೇ manuplate ಮಾಡ್ತಾ ಹೋದೆ... ಆ ಚಿತ್ರಕ್ಕೆ ಮತ್ತಷ್ಟು ರೇಖೆಗಳು ಸುತ್ತಿಕೊಂಡವು....


ಸಾಕೆನಿಸಿತು
ಅಲ್ಲೇ ಬರೆಯಲು ಪ್ರಾರಂಭಿಸಿದೆ
"ಪಯಣದ ಪಯಣಿಗನಿಗೆ
ಮುಖಾಮುಖಿಯಾಗುವುವು
ಹಲವು ಮುಖಗಳು.
ನೆನಪಿನ ಸೌದಕ್ಕೆ
ಹಲವು ಸ್ತಂಬಗಳು
ಸ್ತಂಬಕ್ಕಿಲ್ಲ ಯಾವುದೇ
ಅಡಿಪಾಯಗಳು....
ಆದರು ನಿಂತಿರುತ್ತದೆ
ನೆನಪುಗಳ ಸೂರಿನಡಿಯಲ್ಲಿ
ಸೌದದ ಸೆರಗಲ್ಲಿ
ಕನಸುಗಳ ಕಾನನದಲ್ಲಿ
ಕಾರ್ಗತ್ತಲಲ್ಲಿ ಕಾಣುವ ನೆರಳಂತೆ
ಕಂಡೂ ಕಾಣದಂತೆ.
ಅಷ್ಟರಲ್ಲಾಗಲೇ ಮಂಡ್ಯ ದಾಟಿ ಮದ್ದೂರು ಹತ್ತಿರವಾಗುತ್ತಿತ್ತು...
ಎಷ್ಟೇ ಪ್ರಯತ್ನ ಪಟ್ಟರು ಆಕೆಯ ಮುಖವನ್ನು ನೋಡದೇ ಇರಲಾಗಲಿಲ್ಲ...
ಮತ್ತೆ ಆಕೆಯ ಚಿತ್ರಬರೆದು ಸೆರೆಹಿಡಿಯಲು ಪ್ರಯತ್ನಿಸಿದೆ... ಮೂರು ವರ್ಶಗಳ "ಅಂತರ" ತನ್ನ ಅಂತರವನ್ನು ನೆನಪಿಸಿತು.. ನನ್ನ ರೇಖೆ ವಕ್ರವಾಯಿತು.. ಅದನ್ನು ಕಂಡು ಆ "ಅಂತರ" ಕಿಸಕ್ಕನೆ ಕಿಸಿಯಿತು... ಮತ್ತೆ ಪದಗಳ ದಾಸ್ಯಕ್ಕೆ ಶರಣಾದೆ...

ಮುಂದಿನ ಕೆಲವು ಕ್ಷಣಗಳಲ್ಲಿ
ಮಾಯವಾಗಲಿದೆ ಆ ಮುದ್ದು ಮುಖವು....
ಅದರ ಸೂಚನೆಯೋ ಎಂಬಂತೆ
ಬೆಳಕಿನಡಿಯಲ್ಲಿನ ಕಿಟಕಿಯೊಳಗಿಂದ
ಕಾಣುತ್ತಿದೆ ಬರೀ ಕತ್ತಲು....
ಕತ್ತಲೊಳಗಿಂದ ಬರುತ್ತಿರುವ ತಂಗಾಳಿಯು
ನೆನಪಿಸುತ್ತಿದೆ ಆ ಸ್ನಿಗ್ದ ನಗೆಯ.
ಮತ್ತೆ ಮುಂದುವರೆಯಲಿದೆ
ನೆನಪಿನ ನಗಾರಿಯ ಸದ್ದಿನೊಂದಿಗೆ
ಮುಂದಿನ ನನ್ನೀ ಪಯಣವು...
ಆ ನೆನಪುಗಳನ್ನು ಮೆಲುಕಾಕ್ತಾ ಇನ್ನೊಂದೆರೆಡು ಚಿತ್ರಗಳ ರಚಿಸುವುದರಲ್ಲಿ ಮುಳುಗಿಹೋದೆ...



ಕಿವಿಯಲ್ಲಿ ಸೋನು ನಿಗಂ "ಕಲ್ ಹೋನ ಹೋ" ಎಂದು ಶುರುವಿಟ್ಟುಕೊಂಡ...






Sunday, November 15, 2009

ಕಲೆ ಮತ್ತು ಶ್ರೀ ಸಾಮಾನ್ಯ

ಗುಣಮಟ್ಟವು ಬಹು ಸಂಖ್ಯೆಗೆ ತಲೆಬಾಗದಿರುವುದೇ... ಗಂಬೀರ ಕಲೆಯ ಲಕ್ಷಣ...... ಶ್ರೀ ಸಾಮಾನ್ಯ ಇಂತಹ ಕಲೆಯಿಂದ ಸದಾ ಅಂತರವನ್ನು ಕಾಯ್ದು ಕೊಳ್ಳುತ್ತಾನೆ.... ಕಾರಣ ಈ ಗಂಬೀರ ಕಲೆಯನ್ನು ಮಾಡುವವರು ತುಂಬಾ ಬುದ್ದಿವಂತರೆಂದು...
ಕಲೆ ಮತ್ತು ಶ್ರೀ ಸಾಮಾನ್ಯ.... ಕಲಾವಿಮರ್ಶಕ ಎಚ್ .ಎ. ಅನಿಲ್ ಕುಮಾರ್ ತಮ್ಮ ’ನೋಟ ಪಲ್ಲಟ’ ಪುಸ್ತಕದ ಒಂದು ಲೇಖನದಲ್ಲಿ ಶ್ರಿ ಸಾಮಾನ್ಯನನ್ನು ವಿಶ್ಲೇಶಿಸುವ ಬಗೆ ಇದು.
ಆದರೆ.. ಇವರು ಉದಾಹರಣೆಗೆ ತೆಗೆದು ಕೊಳ್ಳುವ ಶ್ರೀಸಾಮಾನ್ಯ ವಿದ್ಯಾವಂತ,ಸಾಕಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ’ಉಳ್ಳವನು’. ಸಿನಿಮಾಗಳಿಗೆ ಸಂಬಂದಪಟ್ಟ ಹಾಗೆ ನೋಡುವುದಾದರೆ ಗಂಬೀರ ಸಿನಿಮಾಗಳ ಬಹುತೇಕ ಕಥೆಗಳಿಗೆ ಕಥಾವಸ್ತು ಶ್ರಿ ಸಾಮಾನ್ಯ.. ಆದರಲ್ಲಿ ಬಹುತೇಕರು ಅನಕ್ಷರಸ್ಥರು... ಗಿರೀಶ್ ಕಾಸರವಳ್ಳಿ ಅಂತವರ ಬಹುತೇಕ ಸಿನಿಮಾಗಳಲ್ಲಿ ಅನಕ್ಷರಸ್ಥ ಇವರ ಸಿನಿಮಾಗಳ ಮುಖ್ಯ ಪಾತ್ರವಾಗಿರುತ್ತಾನೆ/ಳೆ.

ಆದರೆ ತಮ್ಮ ಕಲಾಕೃತಿಗಳಿಗೆ ಕಥಾ ವಸ್ತುವನ್ನಾಗಿ ಆಯ್ಕೆ ಗೊಳ್ಳುವ ಶ್ರೀಸಾಮಾನ್ಯ ಅವನು ತೆರೆದುಕೊಳ್ಳುವುದು (expose) ಆಗುವುದು... ಯಾರನ್ನು ತಾನು ಬುದ್ದಿವಂತರೆಂದು ದೂರ ಇಟ್ಟಿರುತ್ತಾನೋ ಅದೇ ಸಮಾಜದ ಬುದ್ದಿವಂತರ ಮುಂದೆಯೇ ಹೊರತು. ತಾನು ಪ್ರತಿನಿದಿಸುತ್ತಿರುವ ಸಮಾಜದಲ್ಲಲ್ಲಾ.
ಇಲ್ಲೊಂದು ಕ್ಲೀಷೆ ಈ ಬುದ್ದಿವಂತ ಸಮಾಜದಲ್ಲಿ ಸದಾ ಚಾಲ್ತಿಯಲ್ಲಿದೆ. ಅದು ಏನೆಂದರೆ ಕಲೆನ ಹುಡುಕ್ಕೊಂಡು ಜನ ಬರಬೇಕೆ ಹೊರತು ಜನರನ್ನು ಹುಡುಕಿಕೊಂಡು ಕಲೆಹೋಗಬಾರದು ಅಂತ. ಎಲ್ಲದಕ್ಕೂ ಸದಾ ಪಾಶ್ಚಿಮಾತ್ಯರನ್ನು ಹಿಂಬಾಲಿಸೋ ನಮ್ಮ ಜನರಿಗೆ ಈ ಶ್ರೀಸಾಮಾನ್ಯನ ವಿಷಯದಲ್ಲಿ ಮಾತ್ರ ಪಾಶ್ಚಿಮಾತ್ಯರು ಗಣನೆಗೆ ಬರುವುದಿಲ್ಲಾ... ಕಾರಣ ನಮ್ಮ ಶಿಷ್ಟಬದ್ದ ಸಮಾಜದ ಬುದ್ದಿವಂತ(ಹಾಗೆಂದು ಶ್ರೀಸಾಮಾನ್ಯ ಹೇಳುತ್ತಾನೆ) ಜನರು ತಮ್ಮ ಕಲೆಗಳಲ್ಲಿನ ಶ್ರೀಸಾಮಾನ್ಯನ್ನು ಸಮಾಜದೊಳಗಿನ ಶ್ರೀಸಾಮಾನ್ಯನಿಂದ ಸದಾ ದೂರವಿಟ್ಟಿದ್ದಾರೆ.

ಇದಕ್ಕೆ ಕಾರಣವನ್ನು ಗಂಭೀರಕಲೆಯ ಕಲಾವಿದರು ಮೊದಲಿನಿಂದಲೂ ಕೊಡುತ್ತಲೇ ಇದ್ದಾರೆ. ಅದೇನೆಂದರೆ ಶ್ರೀಸಾಮಾನ್ಯನಿಗೆ ಸದಾ ತನಗೆ ಗೊತ್ತಿರುವ ಪುರಾಣ, ಕಥೆಗಳ ಬಗ್ಗೆ ರಚಿತವಾದ ಕಲಾಕೃತಿಗಳನ್ನಾದರೆ ಹೆಚ್ಚು ಆಸ್ಥೆಯಿಂದ ನೋಡುತ್ತಾನೆ.. ಅದೇ ರವಿಚಂದ್ರನ್ ನ ’ಏಕಾಂಗಿ’ ಸಿನಿಮಾನ ಒಂದೇ ದಿನಕ್ಕೆ ಥಿಯೇಟರ್ನಿಂದ ಹೊರಗೆ ಓಡಿಸುತ್ತಾನೆ.ಇದಕ್ಕೆ ಕಾರಣ ಅವನು ಬುದ್ದಿವಂತನಲ್ಲ.. ಅವನಿಗೆ ತುಂಬಾ ಬುದ್ದಿವಂತಿಕೆಯಿಂದ ಹೇಳಿದರೆ ಅರ್ಥವಾಗುವುದಿಲ್ಲಾ... ನಮಗೆ ಅವನಿಗಿಷ್ಟವಾಗೋ ರೀತಿಯ ಸರಳತೆಯಲ್ಲಿ ಹೇಳುವುದು ಇಷ್ಟವಿಲ್ಲಾ.
ಹಾಗಾದರೆ ಶ್ರೀಸಾಮಾನ್ಯ ಇನ್ನೂ ಪುರಾಣ ಕಥೆಗಳಲ್ಲಿರುವಂತ ನಾಯಕ, ನಾಯಕಿ ಪ್ರದಾನವಾದಂತ ಕಥಾ ಶೈಲಿಯ ಜನಪ್ರಿಯತೆಯ ಮುಖವಾಡದ ಕಲೆಯನ್ನಷ್ಟೇ ಮೆಚ್ಚುತ್ತಾನೆ ಎನ್ನುವುದಾದರೆ ಈ ಜನಪ್ರಿಯ ನಗರ ಕೇಂದ್ರೀಕೃತ ಸಿನಿಮಾಗಳು ಬರುವ ಮೊದಲು ಹಾಗೂ ಐವತ್ತು ಅರವತ್ತರ ದಶಕದನಂತರ ಬಂದ ಸಿನಿಮಾಗಳಲ್ಲಿ ಮುಖ್ಯ ಕಥಾ ನಾಯಕ ಹಳ್ಳಿಯ ರೈತ.. ಅದರಲ್ಲಿಯ ಪಾತ್ರವನ್ನು ಮೆಚ್ಚಿದ್ದಾದರೂ ಏಕೆ....?

ಕಾರಣ ಸ್ಪಷ್ಟ..
ಅಲ್ಲಿಯವರೆಗೂ ಸಿನಿಮಾ ಎಂದರೆ ಸಾರ್ವಜನಿಕ ಸಮಾಜದಿಂದ ಬೇರೆಯದೇ ಪ್ರಪಂಚ. ಅಲ್ಲಿ ಕಥೆಯಾಗಬೇಕಾದರೆ ನಮ್ಮ ಸಾಮಾನ್ಯ ಜನಜೀವನಕ್ಕಿಂತ ವಿಭಿನ್ನವಾದ ಜನಜೀವನವಾಗಬೇಕು ಎಂಬ ಭ್ರಮೆಯಲ್ಲಿದ್ದವನಿಗೆ ತಮ್ಮ ’ಸಾಮಾನ್ಯ’ ಜೀವನವೂ ಕಥೆಯೆಂಬ ಚೌಕಟ್ಟಿನಲ್ಲಿ ನೋಡಿದರೆ”ಅಸಾಮಾನ್ಯ’ ಕಥೆಯಾಗಬಹುದು, ನಮ್ಮ ನಾಎ ಗುರುತಿಸದ ವಿಬಿನ್ನತೆಯನ್ನು ನಾವು ಕಾಣಬಹುದು ಎಂಬುದನ್ನು ಕಂಡುಕೊಂಡನು. ಆಗಿನ ಸಿನಿಮಾಗಳಲ್ಲಿನ ಸ್ಥಳೀಯತೆ (nativity) ಯು ಅವನನ್ನು ಆಕರ್ಶಿಸಿತು... ಆ ಆಕರ್ಶಣೆಯಲ್ಲೇ ಆ ಕಥೆಯೊಳಗಿನ ವಸ್ತುವಿನ ಬಗ್ಗೆ ಚಿಂತಿಸಲು ತೊಡಗಿದನು.
ಶ್ರೀ ಸಾಮಾನ್ಯ ತನ್ನನ್ನು ಪ್ರತಿನಿದಿಸುವ ಕಲೆಯಲ್ಲಿನ ವಸ್ತುವಿನ ಬಗ್ಗೆ ಎಷ್ಟು ಪ್ರಬುದ್ದ ಆಲೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ’ಬಂಗಾರದ ಮನುಷ್ಯ ’ ಸಿನಿಮಾದಿಂದ ಪ್ರಭಾವಿತರಾಗಿ ಈಗಲೂ ಅದೆಶ್ಟೋ ರೈತರು ಬೇಸಾಯವನ್ನೇ ಇಂದಿಗೂ ನೆಚ್ಚಿಕೊಂಡಿದ್ದಾರೆ.

ಇನ್ನು ನಗರದಲ್ಲಿನ ಸಾಮಾನ್ಯ ಜನರು ಪ್ರತಿದಿನ ವ್ಯಯಿಸುವ ಮೂರು ವಿಬಿನ್ನ ಸ್ಥಳಗಳನ್ನು ಎಚ್.ಎ.ಅನಿಲ್ ಕುಮಾರ ರವರು ಗುರುತಿಸುವುದು ತನ್ನ ಮನೆ, ತನ್ನ ಕಚೇರಿ, ಹಾಗೂ ತಾನು ಪ್ರತಿನಿತ್ಯ ಓಡಾಡುವ ರಸ್ತೆಗಳು.
ಸರಿ. ಇವು ಕಚೇರಿಗಳಲ್ಲಿ ಕೆಲಸಮಾಡುವ ಶ್ರೀಸಾಮಾನ್ಯರು ಈ ಮೂರು ಸ್ಥಳಗಳನ್ನು ನಿತ್ಯ ನೋಡುತ್ತಾರೆ.. ಆದರೆ ಅದೇ ಸಮಾಜದಲ್ಲಿ ಮತ್ತೊಂದು ಗುಂಪಿದೆ ಅವರಿಗೆ ತಮ್ಮ ಮನೆ ಬಿಟ್ಟರೆ ಅವರಿಗೆ ಕಾರ್ಯ ನಿರ್ವಹಿಸುವ ಕಚೇರಿ.. ಅವರೇ ಬೀದಿ ಬದಿಯ ವ್ಯಾಪಾರಿಗಳು, ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳು ಇವರಿಗೆ ನಿತ್ಯ ಚಟುವಟಿಕೆ ಹಾಗೂ ವ್ಯಾಪಾರ ವಹಿವಾಟಿನ ಸ್ಥಳಗಳು....

ವರು ತಮ್ಮ ಮನೆಯನು ಹೊರತು ಪಡಿಸಿ ತಮ್ಮ ದಿನದ ಬಹುತೇಕ ಸಮಯವನ್ನು ಕಳೆಯುವುದು ಇಲ್ಲಿಯೇ. ಇಲಿ ಅವರಿಗೆ ರಿಮೋಟ್ ಕೈಯಲ್ಲಿಲ್ಲದಿದ್ದರೂ ಅವರ ಮುಂದೆ ಚಿತ್ರಗಳು ಸದಾ ಚಲಿಸುತ್ತಲೇ ಇರುತ್ತವೆ.ಇವರು ನಿಂತಲ್ಲಿಯೇ ಬೆಳಕಿನ ದಿನ ನಿತ್ಯದ ಮೂರು ಆಯಾಮಗಳನ್ನು ನೋಡುತ್ತಾರೆ.
ಅನಿಲ್ ಕುಮಾರ್ ರವರು ಗುರುತಿಸುವ ಮತ್ತೊಂದು ಅಂಶ ಈ ಸಾಮಾನ್ಯನಿಗೂ ಒಪ್ಪುತ್ತದೆ ಅದೇನೆಂದರೆ ’ಮನೆಯೊಳಗಿನ ಶ್ರೀಸಾಮಾನ್ಯ ಕಲೆಯನ್ನು ಹುಡುಕಿಕೊಂಡು ಹೋಗುವುದಿಲ್ಲಾ... ಅದೇ ಕಲೆ ಟಿವಿ ಮೂಲಕ ತನ್ನ ಬಳಿಗೇ ಬಂದರೆ ರಿಮೋಟ್ ಮೂಲಕ ಅದನ್ನು ಚಿದ್ರಗೊಳಿಸುತ್ತಾ ತನಗೆ ಬೇಕಾದ ಇನ್ನೇನನ್ನೋ ಹುಡುಕುತ್ತಾ ಹೋಗುತ್ತಾನೆ.’ ಅದೇ ರೀತಿಯಲ್ಲಿ ವ್ಯಾಪಾರಿಯೂ ಸಹ ತನ್ನ ಮುಂದೆ ಓಡಾಡುತ್ತಿರುವವರಿಗೆ ತಾನು ಆಕರ್ಶಣೆಯಾಗಿ ಕಂಡರೂ, ಕಾಣದಿದ್ದರೂ ತಾನು ಮಾತ್ರ ಅವರೊಳಗೆ ಇನ್ನೇನನ್ನೋ ಹುಡುಕುತ್ತಾ ಇರುತ್ತಾನೆ/ಳೆ ಹೊರತು ತನ್ನನ್ನು ತಾನು ವಿಶೇಷ ಎಂದು ಗುರುತಿಸಿಕೊಳ್ಳುವುದೇ ಇಲ್ಲಾ... ಹಾಗು ತಾನು ಸಹ ಒಂದು ವಿಷ್ಯಕ್ಕೆ , ಗಂಭೀರ ಚಿಂತನೆಗೆ ವಸ್ತುವಾಗಬಹುದು ಎಂಬ ವಿಷಯ ಅವನು ಅರಿತಿರುವುದಿಲ್ಲ.

ಹಿಂದಿನ ಸೈನ್ ಬೋರ್ಡ್ ಗಳಲ್ಲಿ ಕಾಣುವ ಕುಶಲತೆಯು ಸೆಳೆದಂತೆ ಇಂದಿನ ಡಿಜಿಟಲ್ ಬೋರ್ಡ್ಗಳು ಸೆಳೆಯಲು ವಿಫಲವಾಗುವುದನ್ನು " ಜೀನ್ ಬ್ರೌದಿಲ್ಲಾರ್ಡ್" ಪೊರ್ನೋಗ್ರಫಿಗೆ ಹೋಲಿಸುತ್ತಾನೆ. ಆಸೆ ಹುಟ್ಟಿಸಿ ಪೂರ್ಣತೆಯಭಾವ ದೊರಕಿಸದಿರುವುದು ಬೃಹತ್ ಡಿಜಿಟಲ್ ಜಾಹೀರಾತು ಹಾಗೂ ಫೋರ್ನೋಗ್ರಪಿಯ ಮೂಲಭೂತ ಲಕ್ಷಣ ಎಂದು ಹೇಳುತ್ತಾನೆ.ಆದರೆ ಸ್ವತಃ ಸೈನ್ ಬೋರ್ಡ್ ಕಲಾವಿದನಾದ ನಾನು ಗ್ರಹಿಸಿರುವುದು ಸಾಮಾನ್ಯನ ದೃಷ್ಟಿಕೋನದಲ್ಲಿ .. ಚಿತ್ರಕಲೆಯಲ್ಲಿ ಶ್ರೀಸಾಮಾನ್ಯ ಎಷ್ಟೇ ನೈಜತೆಯನ್ನು , ಕುಶಲತೆಯನ್ನು ಗ್ರಹಿಸಿದರು, ಅನುಭವಿಸಿದರು. ಅವನಿಗೆ ಡಿಜಿಟಲ್ ಕೃತಿ ಕೊಟ್ಟಷ್ಟು ಪೂರ್ಣತೆ ಬಣ್ಣದಿಂದ ರಚಿತ ಕೃತಿ ನೀಡುವುದಿಲ್ಲಾ.

ಶ್ರೀ ಸಾಮಾನ್ಯ ತನ್ನ ದಿನ ನಿತ್ಯ್ದ ಚಟುವಟಿಕೆ ಸ್ಥಳಗಳಲ್ಲಿ ತನ್ನ ಚಿತ್ರ ಮುಖ್ಯವಾಹಿನಿಯಾಗಿ ದೊಡ್ಡ ಜಾಹಿರಾತಿನಲ್ಲಿ ಕಂಡುಕೊಂಡರೆ ತನ್ನನ್ನು ತಾನು ಅದೇ ಬೋರ್ಡಿನಲ್ಲಿ ಈ ಹಿಂದೆ ಇದ್ದ , ಉಪೇಂದ್ರ ನ ಅಥವ ದರ್ಶನ್ ನ ಸಮಕ್ಕೆ ಊಹಿಸಿಕೊಳ್ಳುತ್ತಾನೆ. ಇದನು ರಚಿತ ಕಲೆ ಅವನಿಗೆ ನೀಡುವುದಿಲ್ಲಾ.


Tuesday, November 3, 2009

”ಕೋಡೋಣ... ಇನ್ನೂ ಟೈಮಿದೆ”.. ಎಂದಿದ್ದ ದೇವರಾಜ್... ಇಂದಿಲ್ಲ...

೨೦೦೧ ರ ನವೆಂಬರ್ ತಿಂಗಳು...
ಕಾಲೇಜ್ನಲ್ಲಿ ಡ್ರಾಯಿಂಗ್ ಮಾಡ್ತಾ ಕೂತಿದ್ದೆ....
ಅದು ಕಲಾಶಿಬಿರಕ್ಕೆ ಮುನ್ನದ ತಯಾರಿ ನಡೀತಾ ಇದ್ದಂತ ದಿನಗಳು...
ಕಳೆದ ವರ್ಷದ ಕಲಾಶಿಬಿರದ ರಸವತ್ತಾದ ಅನುಭವಗಳನ್ನು ಸ್ನೇಹಿತರಿಂದ ಕೇಳಿ ... ನನ್ನ ಮೊದಲ ಕಲಾಶಿಬಿರಕ್ಕೆ ಹುರುಪಿನಿಂದ ತಯಾರಿ ನಡೆಸುತ್ತಿದ್ದೆ...
ಅಂದು ಮದ್ಯಾಹ್ನ ಊಟದ ನಂತರ ಕೆಲಸದಲ್ಲಿ ನಿರತನಾಗಿದ್ದೆ ಆಗ ಚಂದ್ರು ಸರ್ ಜೊತೆ ಒಬ್ರು ಒಳಗೆ ಬಂದ್ರು..

ಆ ಕಾಲೇಜ್ನಲ್ಲಿ ಕರೆಸ್ಪಾಂಡೆನ್ಸ್ ನಲ್ಲಿ ತುಂಬಾ ಜನ ಡ್ರಾಯಿಂಗ್ ಕಲಿತಾ ಇದ್ದಿದ್ರಿಂದ.. ನಾನು ನಿರಾಸಕ್ತನಾಗಿ ನನ್ನ ಕೆಲಸ ಮುಂದುವರೆಸಿದ್ದೆ.. ನಾನು ಕುಂತಿರುವ ಹಿಂದಿನ ಗೋಡೆಗೆ ನಾನು ಮಾಡಿದ್ದ ಎರೆಡು still life ಪೈಂಟಿಂಗ್ಸ್ ನೇತಾಕಿದ್ದೆ....

ಅದರ ಜೊತೆಗೆ ಇನ್ನೊಂದಷ್ಟು ಕಲಾಕೃತಿಗಳು ಗೋಡೆಗೆ ನೇತಾಕಿದ್ದರು.. ಅವನ್ನೆಲ್ಲಾ ನೋಡುತ್ತಾ ಬಂದ ಆ ಆಗಂತುಕ .. ಚಂದ್ರು ಸರ್ ಹತ್ತಿರ ನನ್ನ ಪೈಂಟಿಂಗ್ಸ್ ತೋರಿಸಿ.. ಇದ್ಯಾರು ಮಾಡಿದ್ದು ಅಂತ ಕೇಳಿದ.. ಅವ್ರು ನನ್ ಕಡೆಗೆ ತೋರಿಸಿದರು... ನಾನು ಆ ಆಗಂತುಕನ್ನು ನೋಡಿದೆ... ನಿಮ್ದಾ... (ಸ್ಮೈಲ್) ಹು ಅಷ್ಟೇ ನಿರಾಸಕ್ತಿಯಿಂದ... ಅವನ ಹಾವ ಭಾವ ಸ್ವಲ್ಪ ವಿಚಿತ್ರವಾಗಿತ್ತು.... ಯಾರೊ ಸೀನಿಯರ್ ಇರ್ಬಹುದೇನೋ ಅಂತ ಅನ್ಕೊಂಡೆ...


ಮಾರನೆಯ ದಿನ ನಮ್ ಪ್ರಯಾಣ
ಆರು ಘಂಟೆಗೆ ಮೆಜೆಸ್ಟಿಕ್ ಗೆ ಬಂದೆ.. ಅಲ್ಲಿಯವರೆಗೂ ಬರೀ NCC NSS ಕ್ಯಾಂಪ್ ಗಳಿಗೆ ಮಾತ್ರ ಹೋಗಿದ್ದ ನನಗೆ ... ಮೊದಲನೆಯ ಪೈಂಟಿಂಗ್ ಕ್ಯಾಂಪ್ ಗೆ ಹೋಗ್ತಾ ಇರೊದು ಸಕ್ಕತ್ತ್ ಖುಶಿಯಾಗಿತ್ತು...
ಅದರಲ್ಲು ಹುಡುಗರು ಹುಡುಗೀರು ಒಂದೆ ಕಡೆ ಮಲಗೋದು.. ಒಂದೇ ಜೊತೆಯಲ್ಲಿರೊದು.. ಅಂತ ಗೊತ್ತಾಗಿ ಸ್ವಲ್ಪ ಎಕ್ಸೈಟ್ ಆಗಿತ್ತು.....
ಆರು ಗಂಟೆಗೆ ಮೆಜೆಸ್ಟಿಕ್ನಲ್ಲಿ ಬಂದು ಪ್ಲಾಟ್ ಫಾರಂ ಹತ್ತಿರ ಹೋಗಿ ನೋಡಿದ್ರೆ ಅದಾಗಲೇ ಜೀನಾ ಮಂಜುಳ ಬಂದು ನಿಂತಿದ್ರು.. ಅವರೊಂದಿಗೆ ಜರ್ಕಿನ್ ನಲ್ಲಿ ತಲೆ ಸಮೇತ ಅರ್ಧ ದೇಹ ಕವರ್ ಆಗಿರೋ ಯಾರೋ ನಿಂತಿದ್ರು... ಒಂದ್ ಕೈಯಲ್ಲಿ ಬೋರ್ಡಿತ್ತು... ಮಂಜುಳ ಅಥವ ಜೀನಾ ಕಡೆಯವರು ಇರ್ಬಹುದೇನೋ ಅನ್ಕೊಂಡ್ ಹತ್ತಿರ ಹೋದ್ರೆ... ನಿನ್ನೆಯ ಆಗಂತುಕ... ಆಶ್ಚರ್ಯ... ಇವ್ನೂ ನಮ್ ಕಾಲೇಜಾ... ಅನ್ಕೊಂದ್ ಹತ್ತಿರ ಹೋದ್ ತಕ್ಷಣ ... ಎಷ್ಟೋ ದಿನಗಳ ಪರಿಚಯವಿರುವವರಂತೆ..
’ಹಾಯ್” ಅಂತದ್ದ ..
ನಾನು ’ಹಾಯ್”ಅಂದೆ..

ನನ್ ಹೆಸ್ರು "ದೇವರಾಜ್"...

ಹೀಗೆ ನನ್ನ ದೇವರಾಜ್ ಪರಿಚಯವಾದದ್ದ್ದು... ದೇವರಾಯನದುರ್ಗಕ್ಕೆ ಹೋಗೋವರ್ಗು ಯಾರೊ ಸೀನಿಯರ್ ಇರ್ಬಹುದು ಅನ್ಕೊಂಡಿದ್ದ ನನಗೆ... ಅಲ್ಲಿಗೆ ಹೋದ ಮೇಲೆ ಮೊದಲು ತಿಳಿದದ್ದು ಅವರ ನನ್ನ classmate ಆ ನಂತರ ಅವರ ವಿಶ್ವರೂಪ ಕಂಡಿದ್ದು....

ಚಿತ್ರ ರಚನೆಯಲ್ಲಿ ಅವರಿಗಿದ್ದ ಸೂಕ್ಷ್ಮತೆ ಮತ್ತು ತದೇಕಚಿತ್ತ ಏಕಾಗ್ರತೆ.. ಆ ನಂತರ ಅಲ್ಲಿಯವರೆಗು ನನಗೆ ಅವರ ನಡೆಯಲ್ಲಿ ಕಂಡಿದ್ದ ವಿಚಿತ್ರ ಹಾವ ಭಾವಗಳ ಹಿಂದಿರುವ ನೈಜ ದರ್ಶನ.....

ಅವರ ನೃತ್ಯ....

ಅಲ್ಲಿಯವರೆಗೂ ಶಾಸ್ತ್ರೀಯ ನೃತ್ಯವೆಂದರೆ ಅಸಡ್ಡೆಯಿಂದ ಇದ್ದ ನನಗೆ ಶಾಸ್ತ್ರೀಯ ನೃತ್ಯದ ಆ ದಿವ್ಯಾನುಭೂತಿಯ ಸವಿ ತೋರಿಸಿಕೊಟ್ಟರು...
ನಾ ಕಂಡ ಅಪ್ರತಿಮ ನೃತ್ಯಪಟು...
ಶಾಸ್ತ್ರೀಯ ನೃತ್ಯವನ್ನು ಅರೆದು ಕುಡಿದಿದ್ದ ದೇವರಾಜ್... ಅವರ..
" ಆಡಿಸಿದಳು ಯಶೋದೆ" ಮತ್ತು "ಶಿವತಾಂಡವ" ನೃತ್ಯ ಮಾಡುವ ಪರಿಯನ್ನು ನೆನಪಿಸಿಕೊಂಡ್ರೆ ಮೈರೋಮಾಂಚನಗೊಳ್ಲುತ್ತದೆ...

ಅವರು ರಚಿಸುತ್ತಿದ್ದ ರೇಖಾಚಿತ್ರಗಳು ನನಗೆ ಅಲಂಕಾರಿಕ ಹಾಗು ಶಿಲ್ಪಗಳ ರೇಖಾ ಚಿತ್ರ ರಚನೆಗೆ ಪ್ರೇರಣೆ ನೀಡಿದಂತಹುವು. ಅಲ್ಲಿಂದ ಶುರುವಾಯ್ತು ನನ್ನ ಕಾಟ ಅವರಿಗೆ.. ಸತತ ಐದು ವರ್ಶಗಳು ಅವರಿಗೆ ನಾಟ್ಯದ ಮುದ್ರೆಗಳ ರೇಖಾ ಚಿತ್ರಗಳನ್ನು ಬರೆದುಕೊಡಿರೆಂದು ಹಿಂದೆ ಬಿದ್ದೆ... ಕೇಳಿದಾಗಲೆಲ್ಲಾ..

”ಕೋಡೋಣ... ಇನ್ನೂ ಟೈಮಿದೆ”

ಎಂಬ ... ಡೈಲಾಗ್....ಡೈಲಾಗ್ ಹೀಗೆ ಮದ್ಯಂತರದಲ್ಲಿ ಅಂತ್ಯವಾಗುವುದೆಂದು ನಾನೆಂದು ಎಣಿಸಿರಲಿಲ್ಲ..
ದೇವು.....
ನಿಮ್ಮೊಳಗಿದ್ದ ಅನಾರೋಗ್ಯ ನಿಮ್ಮನ್ನು ನಮ್ಮಿಂದ ದೂರ ಮಾಡಿರಬಹುದು.. ಆದ್ರೆ ಇಂದು ನಾನು ಚಿತ್ರಕಲಾ ಇತಿಹಾಸದಲ್ಲಿ ಏನಾದರು theory ಕಲಿತಿದ್ದೇನೆಂದರೆ ಅದರ ಹಿಂದಿರುವ ಸ್ಪೂರ್ತಿ ನೀವು... ಅದು ಸದಾ ನನ್ನೊಂದಿಗಿರುತ್ತದೆ...