Tuesday, November 3, 2009

”ಕೋಡೋಣ... ಇನ್ನೂ ಟೈಮಿದೆ”.. ಎಂದಿದ್ದ ದೇವರಾಜ್... ಇಂದಿಲ್ಲ...

೨೦೦೧ ರ ನವೆಂಬರ್ ತಿಂಗಳು...
ಕಾಲೇಜ್ನಲ್ಲಿ ಡ್ರಾಯಿಂಗ್ ಮಾಡ್ತಾ ಕೂತಿದ್ದೆ....
ಅದು ಕಲಾಶಿಬಿರಕ್ಕೆ ಮುನ್ನದ ತಯಾರಿ ನಡೀತಾ ಇದ್ದಂತ ದಿನಗಳು...
ಕಳೆದ ವರ್ಷದ ಕಲಾಶಿಬಿರದ ರಸವತ್ತಾದ ಅನುಭವಗಳನ್ನು ಸ್ನೇಹಿತರಿಂದ ಕೇಳಿ ... ನನ್ನ ಮೊದಲ ಕಲಾಶಿಬಿರಕ್ಕೆ ಹುರುಪಿನಿಂದ ತಯಾರಿ ನಡೆಸುತ್ತಿದ್ದೆ...
ಅಂದು ಮದ್ಯಾಹ್ನ ಊಟದ ನಂತರ ಕೆಲಸದಲ್ಲಿ ನಿರತನಾಗಿದ್ದೆ ಆಗ ಚಂದ್ರು ಸರ್ ಜೊತೆ ಒಬ್ರು ಒಳಗೆ ಬಂದ್ರು..

ಆ ಕಾಲೇಜ್ನಲ್ಲಿ ಕರೆಸ್ಪಾಂಡೆನ್ಸ್ ನಲ್ಲಿ ತುಂಬಾ ಜನ ಡ್ರಾಯಿಂಗ್ ಕಲಿತಾ ಇದ್ದಿದ್ರಿಂದ.. ನಾನು ನಿರಾಸಕ್ತನಾಗಿ ನನ್ನ ಕೆಲಸ ಮುಂದುವರೆಸಿದ್ದೆ.. ನಾನು ಕುಂತಿರುವ ಹಿಂದಿನ ಗೋಡೆಗೆ ನಾನು ಮಾಡಿದ್ದ ಎರೆಡು still life ಪೈಂಟಿಂಗ್ಸ್ ನೇತಾಕಿದ್ದೆ....

ಅದರ ಜೊತೆಗೆ ಇನ್ನೊಂದಷ್ಟು ಕಲಾಕೃತಿಗಳು ಗೋಡೆಗೆ ನೇತಾಕಿದ್ದರು.. ಅವನ್ನೆಲ್ಲಾ ನೋಡುತ್ತಾ ಬಂದ ಆ ಆಗಂತುಕ .. ಚಂದ್ರು ಸರ್ ಹತ್ತಿರ ನನ್ನ ಪೈಂಟಿಂಗ್ಸ್ ತೋರಿಸಿ.. ಇದ್ಯಾರು ಮಾಡಿದ್ದು ಅಂತ ಕೇಳಿದ.. ಅವ್ರು ನನ್ ಕಡೆಗೆ ತೋರಿಸಿದರು... ನಾನು ಆ ಆಗಂತುಕನ್ನು ನೋಡಿದೆ... ನಿಮ್ದಾ... (ಸ್ಮೈಲ್) ಹು ಅಷ್ಟೇ ನಿರಾಸಕ್ತಿಯಿಂದ... ಅವನ ಹಾವ ಭಾವ ಸ್ವಲ್ಪ ವಿಚಿತ್ರವಾಗಿತ್ತು.... ಯಾರೊ ಸೀನಿಯರ್ ಇರ್ಬಹುದೇನೋ ಅಂತ ಅನ್ಕೊಂಡೆ...


ಮಾರನೆಯ ದಿನ ನಮ್ ಪ್ರಯಾಣ
ಆರು ಘಂಟೆಗೆ ಮೆಜೆಸ್ಟಿಕ್ ಗೆ ಬಂದೆ.. ಅಲ್ಲಿಯವರೆಗೂ ಬರೀ NCC NSS ಕ್ಯಾಂಪ್ ಗಳಿಗೆ ಮಾತ್ರ ಹೋಗಿದ್ದ ನನಗೆ ... ಮೊದಲನೆಯ ಪೈಂಟಿಂಗ್ ಕ್ಯಾಂಪ್ ಗೆ ಹೋಗ್ತಾ ಇರೊದು ಸಕ್ಕತ್ತ್ ಖುಶಿಯಾಗಿತ್ತು...
ಅದರಲ್ಲು ಹುಡುಗರು ಹುಡುಗೀರು ಒಂದೆ ಕಡೆ ಮಲಗೋದು.. ಒಂದೇ ಜೊತೆಯಲ್ಲಿರೊದು.. ಅಂತ ಗೊತ್ತಾಗಿ ಸ್ವಲ್ಪ ಎಕ್ಸೈಟ್ ಆಗಿತ್ತು.....
ಆರು ಗಂಟೆಗೆ ಮೆಜೆಸ್ಟಿಕ್ನಲ್ಲಿ ಬಂದು ಪ್ಲಾಟ್ ಫಾರಂ ಹತ್ತಿರ ಹೋಗಿ ನೋಡಿದ್ರೆ ಅದಾಗಲೇ ಜೀನಾ ಮಂಜುಳ ಬಂದು ನಿಂತಿದ್ರು.. ಅವರೊಂದಿಗೆ ಜರ್ಕಿನ್ ನಲ್ಲಿ ತಲೆ ಸಮೇತ ಅರ್ಧ ದೇಹ ಕವರ್ ಆಗಿರೋ ಯಾರೋ ನಿಂತಿದ್ರು... ಒಂದ್ ಕೈಯಲ್ಲಿ ಬೋರ್ಡಿತ್ತು... ಮಂಜುಳ ಅಥವ ಜೀನಾ ಕಡೆಯವರು ಇರ್ಬಹುದೇನೋ ಅನ್ಕೊಂಡ್ ಹತ್ತಿರ ಹೋದ್ರೆ... ನಿನ್ನೆಯ ಆಗಂತುಕ... ಆಶ್ಚರ್ಯ... ಇವ್ನೂ ನಮ್ ಕಾಲೇಜಾ... ಅನ್ಕೊಂದ್ ಹತ್ತಿರ ಹೋದ್ ತಕ್ಷಣ ... ಎಷ್ಟೋ ದಿನಗಳ ಪರಿಚಯವಿರುವವರಂತೆ..
’ಹಾಯ್” ಅಂತದ್ದ ..
ನಾನು ’ಹಾಯ್”ಅಂದೆ..

ನನ್ ಹೆಸ್ರು "ದೇವರಾಜ್"...

ಹೀಗೆ ನನ್ನ ದೇವರಾಜ್ ಪರಿಚಯವಾದದ್ದ್ದು... ದೇವರಾಯನದುರ್ಗಕ್ಕೆ ಹೋಗೋವರ್ಗು ಯಾರೊ ಸೀನಿಯರ್ ಇರ್ಬಹುದು ಅನ್ಕೊಂಡಿದ್ದ ನನಗೆ... ಅಲ್ಲಿಗೆ ಹೋದ ಮೇಲೆ ಮೊದಲು ತಿಳಿದದ್ದು ಅವರ ನನ್ನ classmate ಆ ನಂತರ ಅವರ ವಿಶ್ವರೂಪ ಕಂಡಿದ್ದು....

ಚಿತ್ರ ರಚನೆಯಲ್ಲಿ ಅವರಿಗಿದ್ದ ಸೂಕ್ಷ್ಮತೆ ಮತ್ತು ತದೇಕಚಿತ್ತ ಏಕಾಗ್ರತೆ.. ಆ ನಂತರ ಅಲ್ಲಿಯವರೆಗು ನನಗೆ ಅವರ ನಡೆಯಲ್ಲಿ ಕಂಡಿದ್ದ ವಿಚಿತ್ರ ಹಾವ ಭಾವಗಳ ಹಿಂದಿರುವ ನೈಜ ದರ್ಶನ.....

ಅವರ ನೃತ್ಯ....

ಅಲ್ಲಿಯವರೆಗೂ ಶಾಸ್ತ್ರೀಯ ನೃತ್ಯವೆಂದರೆ ಅಸಡ್ಡೆಯಿಂದ ಇದ್ದ ನನಗೆ ಶಾಸ್ತ್ರೀಯ ನೃತ್ಯದ ಆ ದಿವ್ಯಾನುಭೂತಿಯ ಸವಿ ತೋರಿಸಿಕೊಟ್ಟರು...
ನಾ ಕಂಡ ಅಪ್ರತಿಮ ನೃತ್ಯಪಟು...
ಶಾಸ್ತ್ರೀಯ ನೃತ್ಯವನ್ನು ಅರೆದು ಕುಡಿದಿದ್ದ ದೇವರಾಜ್... ಅವರ..
" ಆಡಿಸಿದಳು ಯಶೋದೆ" ಮತ್ತು "ಶಿವತಾಂಡವ" ನೃತ್ಯ ಮಾಡುವ ಪರಿಯನ್ನು ನೆನಪಿಸಿಕೊಂಡ್ರೆ ಮೈರೋಮಾಂಚನಗೊಳ್ಲುತ್ತದೆ...

ಅವರು ರಚಿಸುತ್ತಿದ್ದ ರೇಖಾಚಿತ್ರಗಳು ನನಗೆ ಅಲಂಕಾರಿಕ ಹಾಗು ಶಿಲ್ಪಗಳ ರೇಖಾ ಚಿತ್ರ ರಚನೆಗೆ ಪ್ರೇರಣೆ ನೀಡಿದಂತಹುವು. ಅಲ್ಲಿಂದ ಶುರುವಾಯ್ತು ನನ್ನ ಕಾಟ ಅವರಿಗೆ.. ಸತತ ಐದು ವರ್ಶಗಳು ಅವರಿಗೆ ನಾಟ್ಯದ ಮುದ್ರೆಗಳ ರೇಖಾ ಚಿತ್ರಗಳನ್ನು ಬರೆದುಕೊಡಿರೆಂದು ಹಿಂದೆ ಬಿದ್ದೆ... ಕೇಳಿದಾಗಲೆಲ್ಲಾ..

”ಕೋಡೋಣ... ಇನ್ನೂ ಟೈಮಿದೆ”

ಎಂಬ ... ಡೈಲಾಗ್....ಡೈಲಾಗ್ ಹೀಗೆ ಮದ್ಯಂತರದಲ್ಲಿ ಅಂತ್ಯವಾಗುವುದೆಂದು ನಾನೆಂದು ಎಣಿಸಿರಲಿಲ್ಲ..
ದೇವು.....
ನಿಮ್ಮೊಳಗಿದ್ದ ಅನಾರೋಗ್ಯ ನಿಮ್ಮನ್ನು ನಮ್ಮಿಂದ ದೂರ ಮಾಡಿರಬಹುದು.. ಆದ್ರೆ ಇಂದು ನಾನು ಚಿತ್ರಕಲಾ ಇತಿಹಾಸದಲ್ಲಿ ಏನಾದರು theory ಕಲಿತಿದ್ದೇನೆಂದರೆ ಅದರ ಹಿಂದಿರುವ ಸ್ಪೂರ್ತಿ ನೀವು... ಅದು ಸದಾ ನನ್ನೊಂದಿಗಿರುತ್ತದೆ...

No comments:

Post a Comment