ಸರಿಯಾಗಿ ಎರಡು ವರ್ಷಗಳ ಹಿಂದೆ.. ಇಂದಿನಂತೆಯೇ ಅಂದು ಮಳೆ ಸುರಿಯುತ್ತಲೇ ಇತ್ತು.. ಮನದೊಳಗೆ ಕಟ್ಟಿದ್ದ ದುಃಖದ ಒಡಲು ಇನ್ನಷ್ಟು ದುಃಖವನ್ನು ಸೇರಿಸಿಕೊಳ್ಳುತ್ತಿತ್ತು. ಪಿತಾಜಿ ನೀವು ಇಲ್ಲಿನ ನಿಮ್ಮ ಪಾಲಿನ ಕೆಲಸಗಳನ್ನು ಮುಗಿಸಿ ಹೊರಡಲು ಅಣಿಯಾಗಿದ್ದೀರೆಂಬ ವಿಷಯ ಬೆಳಗ್ಗೇನೆ ಗೊತ್ತಾಗಿತ್ತು. ನಾವು ಅನುಮತಿಸುವುದಿಲ್ಲ ಎಂಬ ಭಾವದಿಂದಲೇ ನಮ್ಮೊಂದಿಗೆ ಮಾತಿನ ಸಂಪರ್ಕ ತೊರೆದು.. ನಿಮ್ಮ ಪಯಣದ ದಿನಗಳನ್ನು, ಮಾತುಗಳನ್ನು ಮೆಲುಕು ಹಾಕುತ್ತಿದ್ರಿ, ಅಷ್ಟು ದೈಹಿಕ ನೋವನ್ನು ಸಹಿಸಿಕೊಂಡೂ ಸಹ ನಿಮ್ಮ ಸ್ನೇಹಿತರನ್ನು ನೆನಪುಗಳನ್ನು ಮೆಲುಕು ಹಾಕುತ್ತಿದ್ರಿ. ನಾವು ನಿಮ್ಮನ್ನು ನಿಮ್ಮ ನೆಚ್ಚಿನ ವಿಧ್ಯಾಪೀಠಕ್ಕೆ ಕರೆದುಕೊಂಡು ಹೋಗುವ ತಯಾರಿಯಲ್ಲಿದ್ವಿ. ಇಷ್ಟೊತ್ತಿನಲ್ಲಿ ನಿಮಗೆ ಕೊನೆಯ ಬಾರಿ ಡಯಾಲಿಸಿಸ್ ನಡೆಯುತ್ತಿತ್ತು.ಅಕ್ಕ ಅಮ್ಮ ಅಲ್ಲೇ ಇದ್ರು. ನಿಮ್ಮ ಅಣ್ಣ ಅಣ್ನನ ಮಗ ಸೋಮ ನೂ ಇದ್ದ ಪ್ರಶಾಂತ್ ಅಲ್ಲಿಗೆ ಬಂದಿದ್ದ. ನಾನ್ಯಾವತ್ತೂ ನಿಮ್ಮ ಜವಾಬ್ದಾರಿಗಳನ್ನು ಪೂರೈಸುವಂತೆ ಭರವಸೆಯ ಕೆಲಸಗಳನ್ನು ಮಾಡಿರಲಿಲ್ಲ. ನಾನು ನನ್ನ ಕನಸುಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಅದರೆಡೆಗೆ ಮಾತ್ರ ನನ್ನ ಗುರಿ ಇತ್ತು. ಆ ಕನಸುಗಳನ್ನು ನನಸು ಮಾಡಿ ನಿಮಗೆ ತೋರಿಸಬೇಕೆಂಬ ಹಟ ಬಿಟ್ಟರೆ ನೀವು ಬಯಸಿದ್ದ ಜವಾಬ್ದಾರಿಯುತ ಮಗನಾಗಿ ಎಂದೂ ಇರಲಿಲ್ಲ.
ನನ್ನ ಜವಾಬ್ದಾರಿಗಳಿಂದ ಯಾವಗಲು ವಿಮುಖನಾಗಿದ್ದೆ. ನೀವು ನನಗೆ ಯಾವುದೇ ಒತ್ತಡ ಹೇರದೆ, ನನ್ನ ಕನಸುಗಳಿಗೆ ಹೆಗಲು ಕೊಡುತ್ತಲೇ ಬಂದಿದ್ರಿ. ಹಾಗಿದ್ದು ಯಾವ ನಂಬಿಕೆಯ ಮೇಲೆ ಈ ಜವಾಬ್ದಾರಿಗಳನ್ನೆಲ್ಲ ನನ್ನ ಹೆಗಲಿಗೆ ವರ್ಗಾಯಿಸಿ ಹೊರಟು ಬಿಟ್ರಿ, ಈಗಿನ ಸಮಯದಿಂದ ಸರಿಯಾಗಿ ಇಪ್ಪತ್ನಾಲ್ಕು ಘಂಟೆಗಳ ನಂತರ ನೀವು ನಮಗೆ ಭೌತಿಕವಾಗಿ ಗುಡ್ ಬೈ ಹೇಳಿಬಿಟ್ರಿ. ನೀವು ಯಾವ ನಂಬಿಕೆಯ ಆಧಾರದ ಮೇಲೆ ನನಗೆ ಜವಾಬ್ದಾರಿ ಹೊರಿಸಿ ಹೊರಟರೋ ಗೊತ್ತಿಲ್ಲ. ನಾನು ಯಾವ ಜವಾಬ್ದಾರಿಯನ್ನು ಪೂರೈಸಲಾಗಲಿಲ್ಲ. ಈ ಎರಡು ವರ್ಷಗಳ ಅವಧಿಯಲ್ಲಿ ನನ್ನ ಕನಸುಗಳ ಮೂಲಕವೇ ನಿಮ್ಮ ಜವಾಬ್ದಾರಿಯನ್ನು ಪೂರೈಸೋಣ ಎಂದು ಪ್ರಯತ್ನಿಸಿ ಕೊನೆಗೂ ಗೆಲ್ಲಲಾಗದೆ ಸೋತು ಹೋದೆ. ಅದರ ಪರಿಣಾಮವನ್ನು ಎದುರಿಸುತ್ತಿದ್ದೇನೆ. ನನ್ನ ಜೀವನದ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ. ಇದನ್ನು ನಿವಾರಿಸಲೆಂದೇ ನನ್ನ ಕನಸುಗಳನ್ನು ಬದಿಗಿಟ್ಟು ಪಯಣದ ಹಾದಿಯನ್ನು ಬದಲಿಸುತ್ತಿದ್ದೇನೆ. ಆದರೂ ಧೈರ್ಯ ಸಾಲುತ್ತಿಲ್ಲ.
ಈಗಿನ ಹಾದಿಯಲ್ಲಿ ಪಯಣಿಸಿದರೂ ಎಷ್ಟು ವರ್ಷಗಳು ಬೇಕಾಗುತ್ತೋ ಗೊತ್ತಿಲ್ಲ. ಮುಂದಿನ ನನ್ನ ಜೀವನ ಎಲ್ಲಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲರಿನಂತೆ ಅದೇ ನೀರಸ ಜೀವನ ಬಾಳಲು ನನಗೆ ಇಷ್ಟ ಇಲ್ಲ. ನೀವು ಹೊರಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸಲಷ್ಟೇ ಹಾದಿಯನ್ನು ಬದಲಿಸುತ್ತಿರುವುದು. ಅದು ಇನ್ನು ಮೂರು ವರ್ಷಗಳಾಗಬಹುದು, ಅಥವ ಐದು ವರ್ಷಗಳಾಗಬಹುದು. ಆ ಜವಾಬ್ದಾರಿಗಳೆಲ್ಲ ತೀರಿ.. ಅದೇ ಹಾದಿಯನ್ನು ಮುಂದುವರೆಸಬೇಕಾದ ಅನಿವಾರ್ಯತೆ ಎದುರಾದಲ್ಲಿ. ಖಂಡಿತ ಈ ಜೀವನವನ್ನು ಮುಂದುವರೆಸುವುದಿಲ್ಲ. ನಾನು ನಿಮ್ಮನ್ನು ಸೇರಿಕೊಂಡು ಬಿಡುತ್ತೇನೆ. ಇದು ನಿಶ್ಚಿತ. ನನ್ನಂತ ಸೋತ ಮಗನಿಗೆ ಅರ್ಥವೇ ಇಲ್ಲದ ಪಯಣ ಮುಂದುವರೆಸುವುದು ನಿರರ್ಥಕ. ಈಗಿನ ಸೋಲೇ ಈ ನಿಟ್ಟಿನಲ್ಲಿ ಆಲೋಚಿಸುವಂತೆ ಮಾಡಿದ್ದರು. ನೀವು ನನ್ನ ನಂಬಿ ಬಿಟ್ಟು ಹೋದ ಕೆಲಸಗಳಿಗಾಗಿ ಈ ಹಾದಿಯಲ್ಲಿ ಇನ್ನು ಕೆಲ ಕಾಲ ಮುಂದುವರೆಯಲು ನಿಷ್ಚಯಿಸಿದ್ದೇನೆ.
ಇನ್ನು ಮೂರು ಅಥವ ಐದು ವರ್ಷ
ಮಂಸೋರೆ