Thursday, April 30, 2015

ಪಿತಾಜಿ ನಿಮ್ಮ ನೆನಪಿನಲ್ಲಿ



ತುಂಬಾ ದಿನಗಳ ನಂತರ ನಿಮಗೆ ಪತ್ರ ಬರೀತಿದೀನಿ. ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ ಮತ್ತು ನಿಮ್ಮ ಜೀವನದಿಂದ ದೊರೆತ ಸ್ಪೂರ್ತಿಯಿಂದಾಗಿ ನಾನು ಸಾಗಿ ಬಂದ ಹಾದಿಯಲ್ಲಿ, ಇಲ್ಲಿಯವರೆಗಿನ ನನ್ನ ಎಲ್ಲಾ ಜನ್ಮದಿನಗಳಿಗಿಂತಲೂ ಇಂದಿನದು ವಿಶೇಷವೆನಿಸುತ್ತಿದೆ.
ಬಹುಶಃ ಇನ್ನು ಇದು ನನ್ನಿಂದ ಸಾಧ್ಯವಾಗೋದಿಲ್ಲ.. ಇದನ್ನು ಇಲ್ಲಿಗೆ ನಿಲ್ಲಿಸಿಬಿಡೋಣ ಅಂತ ಅನಿಸಿದಾಗೆಲ್ಲಾ ನೀವು ಮುನ್ನಡೆಸಿದಿರಿ.. ವಿಜಯ್, ಅನಿಲ್ ಸರ್, ಸೋಮ, ಶಿವು-ಪವಿತ್ರ, ಪ್ರಶಾಂತ್, ಅಖಿಲಾ, ಹರಿ ಎಂಬ ಮೂರ್ತ ರೂಪಗಳ  ಮೂಲಕ ಈ ಸಿನೆಮಾ ದಡ ಸೇರುವಂತೆ ಮಾಡಿದಿರಿ. ನಾನು ಸಂಪೂರ್ಣವಾಗಿ ಸೋತು ಹೋದೆ ಎಂದನಿಸುವಾಗಲೆಲ್ಲಾ.. ಇವರಲ್ಲಿ ಯಾರೋ ಒಬ್ಬರ ಮೂಲಕ ಮೇಲೆತ್ತಿದಿರಿ.. ಮುನ್ನಡೆಸಿದಿರಿ. ಅದರ ಫಲಿತಾಂಶ ಇಂದು ನಾನು..
ಹಾಗಂತ ನಾನೇನೋ ದೊಡ್ಡ ಸಾದನೆ ಮಾಡಿದ್ದೇನೆ ಎಂದಲ್ಲ. ಆದರೆ ತೀರಾ ಮೊನ್ನೆ-ಮೊನ್ನೆಯವರೆಗೆ ‘ಯಾರೋ’ ಆಗಿದ್ದ ನಾನು ಇಂದು ‘ಓ ಅವ್ನು’ ಅನ್ನೋ ಹಂತಕ್ಕೆ ಬಂದಿದೀನಿ.. ಇದಕ್ಕೆ ಕಾರಣ ‘ನೀವು’.
ಕಳೆದ ವರ್ಷ ಇದೇ ಸಮಯದಲ್ಲಿ ಈ ಸಿನೆಮಾದ್ ಒತ್ತಡವನ್ನು ತಡೆಯಲಾಗದೆ ಗೊತ್ತು ಗುರಿ ಇಲ್ಲದೆ ಹುಚ್ಚನಂತೆ ನಾಂದೇಡ್, ಇಟಾರ್ಸಿ ವರೆಗೂ ಹೋಗಿ.. ಮುಂದೆಲ್ಲಿ ಎಂದು ಯೋಚಿಸುತ್ತಾ.. ಕೊನೆಗೆ ಪರಿಹಾರ ಇಲ್ಲಿಯೇ ಹುಡುಕಬೇಕೆಂದು ವಾಪಸ್ ಬೆಂಗಳೂರಿಗೆ ಬಂದಿದ್ದು. ಬರುತ್ತಾ ದಾರಿ ಮಧ್ಯೆದಲ್ಲೇ ಕನಸಿನ ಕೂಸಾದ ‘ಹರಿವು’ ಪೋಸ್ಟರ್ ರಿಲೀಸ್ ಮಾಡಿ ಇಂದಿಗೆ ಒಂದು ವರ್ಷ. ಆಗ ಗೆಳೆಯರ ಹಾರೈಕೆಗಳು ಅಶ್ಟು ಬಂದಾಗಲೂ ಖಂಡಿತ ಒಂದು ವರ್ಷದ ನಂತರ ನಮ್ಮ ಸಿನೆಮಾ ಈ ಹಂತಕ್ಕೆ ಹೋಗಿ ಮುಟ್ಟುವುದೆಂದು ಖಂಡಿತ ಅನಿಸಿರಲಿಲ್ಲ.
ಈ ಒಂದು ವರ್ಷದ ಅವಧಿಯಲ್ಲಿ ಸಾಗಿ ಬಂದ ಹಾದಿಯನ್ನೊಮ್ಮೆ ನೆನಪಿಸಿಕೊಂಡರೆ.. ಇಷ್ಟೆಲ್ಲಾ ಕಷ್ಟಗಳನ್ನೂ ಸಾಗಿ ಇಲ್ಲಯವರೆಗೂ ನಾನು ಹೇಗೆ ಬಂದೆ ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ. ಕಾರಣ ಎಂತೆಂತಾ ಅನುಭವಗಳು.. ಜೊತೆಗಿದ್ದವರು ತುಂಬಾ ಆತ್ಮೀಯವಾಗಿ ಮುನ್ನಡೆಯುವ ಮಾತನಾಡಿದ್ದವರ ಮುಖವಾಡ ಕಳಚಿದಾಗ ಆಗಿದ್ದ ಆಘಾತ, ಎದುರಿಸಿದ ಆತಂಕ, ಮುಂದೆ ಸಾಗಿದಂತೆಲ್ಲಾ.. ಒಂದಲ್ಲಾ ಒಂದು ರೀತಿಯಲ್ಲಿ ಎದುರಾದ ಸೋಲುಗಳು .. ನಾನು ಆಯ್ಕೆ ಮಾಡಿಕೊಂಡಿದ್ದ ಹಾದಿಯ ಬಗ್ಗೆನೇ ಸಂದೇಹ ಮೂಡುವಂತೆ ಮಾಡಿಬಿಟ್ಟಿದ್ದು ನಿಜ.
ಆದರೆ ಪಿತಾಜಿ ಅಂತಹ ಎಲ್ಲಾ ಹಂತಗಳಲ್ಲೂ ಯಾವುದೋ ಒಂದು ರೀತಿಯಲ್ಲಿ ನನ್ನ ಆಯ್ಕೆ ಸರಿಯಾಗಿದೆ ಎಂದು ನಿರೂಪಿಸುವಂತೆ ಮಾಡಿದಿರಿ. ಸೋಲುಗಳ ಮಧ್ಯೆಯೂ ಮುನ್ನಡೆಸುವಂತ ಗೆಳೆಯರನ್ನು ಹಾಗೂ ಆ ಗೆಳೆಯರ ಮೂಲಕ ಅಂದುಕೊಂಡಿದ್ದನ್ನು ಸಾದಿಸುವ, ಗುರಿಯನ್ನು ದಡ ಸೇರುವಂತೆ ಮಾಡಿದಿರಿ. ಥ್ಯಾಂಕ್ಯೂ ಪಿತಾಜಿ. ಎಲ್ಲಾ ಕಷ್ಟ, ನೋವುಗಳನ್ನು ಮರೆಸುವಂತೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದು ಅಂತಿಮವಲ್ಲ ಆರಂಭ ಮಾತ್ರ. ಮುನ್ನಡೆಯುವ ಹಾದಿಯನ್ನು ಸ್ಪಷ್ಟಗೊಳಿಸುವುದರ ಜೊತೆಗೆ ಇನ್ನೂ ಹೆಚ್ಚು ಜವಾಬ್ದಾರಿ ಬಂದಿದೆ ಎನ್ನುವ ಪ್ರಜ್ಞೆ ನನಗಿದೆ. ಈ ಜವಾಬ್ದಾರಿಯ ಅರಿವು ಸದಾ ಇರುವಂತೆ ನನ್ನ ಆಶೀರ್ವದಿಸಿ.


ಪ್ರಶಸ್ತಿ ಬಂದಿದೆ ಎಂದು ಗೊತ್ತಾದ ಮೇಲೆ ನಿಮ್ಮ ಬಳಿ ಬಂದಿದ್ದಾಗ ನಿಮ್ಮ ನೆರಳಿನಲ್ಲಿ ಕೂತಾಗ ದೊರೆತ ಸಾರ್ಥಕ ಭಾವ ಸದಾ ನನ್ನಲ್ಲಿ ಹೀಗೆ ಇರಲಿ. ಈಗ ದೊರೆತಿರುವ ಫಲಿತಾಂಶ ಮತ್ತಷ್ಟು ದೊಡ್ಡ ಗುರಿಗಳತ್ತ ಸಾಗುವ ಧೈರ್ಯ, ಸ್ಪಷ್ಟತೆ ನನ್ನಲ್ಲಿ ಮೂಡಲಿ ಎಂದು ಆಶೀರ್ವದಿಸಿ. ನಿಮಗೆ ನೀಡಿರುವ ಮಾತುಗಳಲ್ಲಿ ಉಳಿದಿರುವುದನ್ನು ನೆರವರೇಸಲು ಬೇಕಾದ ಮನೋಶಕ್ತಿ ನನ್ನಲ್ಲಿ ಎಂದಿಗೂ ಕಡಿಮೆ ಆಗದಿರಲಿ.
ನೀವು ನಿಮ್ಮ ಬದುಕನ್ನು ಯಾರ ಹಂಗೂ ಇಲ್ಲದೆ ನಿಮ್ಮ ಶಕ್ತಿಯ ಮೇಲೆ ರೂಪಿಸಿಕೊಂಡಿರುವುದೇ ನನಗೆ ಸ್ಪೂರ್ತಿ. ನಿಮ್ಮ ಆಶೀರ್ವಾದದಿಂದ ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳುವೆ ಎಂಬ ಆತ್ಮವಿಶ್ವಾಸ ನನ್ನಲ್ಲಿ ಮೂಡುತ್ತಿದೆ. ಜೊತೆಗೆ ಗೆಳೆಯರ ಹಿರಿಯರ ಬೆಂಬಲವೂ ಇದೆ. ನಾನು ನಡೆಯುತ್ತಿರುವ ಹಾದಿಯ ಪ್ರತೀ ಹೆಜ್ಜೆಯಲ್ಲೂ ನಿಮ್ಮ ನೆರಳು ನನ್ನನ್ನು ಕಾಪಾಡುತ್ತಿರಲಿ.
ಇತೀ ನಿಮ್ಮ ಮಗ

ಬಾಬು-ನಾನ್ನ