Monday, November 17, 2014

ಕನಸು ನನಸಾದ ದಿನ

ನಾನೂ ಸಿನೆಮಾ ನಿರ್ದೇಶನ ಮಾಡಬೇಕೆಂಬ ಕನಸು ಮೊಳಕೆಯೊಡೆದದ್ದೇ, ಮೊದಲ ಬಾರಿಗೆ ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾಗ. ಬೆಂಗಳೂರು ಹೊರತು ಪಡಿಸಿ ಬೇರೆಲ್ಲೂ ಭಾಗವಹಿಸದಿದ್ದರೂ, ಇಲ್ಲಿನ ಚಿತ್ರೋತ್ಸವಕ್ಕೆ ಪ್ರತೀ ಬಾರಿ ಹೋದಾಗಲೂ,  ಅಲ್ಲಿ ಪ್ರದರ್ಶಿತವಾಗುತ್ತಿದ್ದ ಜಗತ್ತಿನ ನಾನಾ ದೇಶಗಳ ಅದ್ಬುತ ಸಿನೆಮಾಗಳನ್ನು ನೋಡುತ್ತಿದ್ದಾಗ ಮುಂದಿನ ಬಾರಿಯಾದರೂ ನನ್ನ ಸಿನೆಮಾ ಇಂತಹ ಸಿನೆಮಾಗಳ ಮಧ್ಯೆ ಪ್ರದರ್ಶಿಸುವಂತಿದ್ದರೆ ಎಂಬ ಆಸೆ ಚಿಗುರೊಡೆಯುತ್ತಲೇ ಬಂತು. ಈ ಆಸೆಯನ್ನು ಅಪ್ಪನೊಂದಿಗೆ ಬಹಳಷ್ಟು ಬಾರಿ ಹೇಳಿಕೊಂಡಿದ್ದೆ. ಅದಕ್ಕಾಗಿ ತುಂಬಾ ಪ್ರಯತ್ನ ಪಟ್ಟಿದ್ದೆ. ಅದಕ್ಕೆ ಅಪ್ಪನ ಮುಕ್ತ ಬೆಂಬಲವೇ ನನಗೆ ದೊಡ್ದ ಶಕ್ತಿಯಾಗಿತ್ತು. ಹಾಗಾಗಿ ನನ್ನಾಸೆ ಈಡೇರಿಸಿಕೊಳ್ಳಲು ೨೦೦೯ರಲ್ಲೇ ಪ್ರಯತ್ನಿಸಿದನಾದರೂ ಅದು ಈಡೇರದೆ ಪ್ರಾರಂಭವಾಗುವ ಮೊದಲೇ ಪರಿಸಮಾಪ್ತಿಯಾಗಿತ್ತು.. ಆ ನಂತರ ೨೦೧೦ರಲ್ಲಿ ನನಗೆದುರಾದ ದೊಡ್ಡ ಆಘಾತ.. ಅಪ್ಪ ಭೌತಿಕವಾಗಿ ನನ್ನ ಬಿಟ್ಟು ಹೋದದ್ದು. ಆನಂತರ ಬಹುತೇಕ ನನ್ನ ಸಿನೆಮಾ ಕನಸನ್ನು ಅಲ್ಲೇ ಚಿವುಟಿ ಹಾಕಿ ಅನಿರೀಕ್ಷಿತವಾಗಿ ಎದುರಾಗಿದ್ದ ಜವಾಬ್ದಾರಿಯ ಕಡೆಗೆ ಗಮನ ಹರಿಸಲು ಪ್ರಾರಂಭಿಸಿದೆ. ಆದರೆ ಒಳಗಿನ ಆಸೆ/ಕನಸು ಹಾಗೂ ಅಪ್ಪನೊಂದಿಗೆ ಮಾಡಿದ್ದ ವಾದ ಹಂಚಿಕೊಂಡಿದ್ದ ಕನಸು, ಕೊಟ್ಟಿದ್ದ ಮಾತು ಒಳಗೊಳಗೆ ಸಿನೆಮಾ ನಿರ್ದೇಶನದ ಆಸೆಯನ್ನು ಹಾಗೆ ಜೀವಂತವಾಗಿರಿಸಿತ್ತು. ಇಂತಹ ಗೊಂದಲದ ಮಧ್ಯೆ ಡಾ.ಆಶಾ ಬೆನಕಪ್ಪನವರ ಅಂಕಣವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ನನ್ನ ಕಣ್ಣಿಗೆ ಬಿತ್ತು. ಅದನ್ನು ಓದುತ್ತಾ ಹೋದಂತೆ ನನ್ನ ನಾನೇ ಪ್ರಶ್ನಿಸಿಕೊಳ್ಳುತ್ತಾ, ನನ್ನ ಜೀವನದೊಂದಿಗೆ ತಳುಕು ಹಾಕುತ್ತಾ ಸಾಗಿದೆ. ಸುಮಾರು ಮೂರು ತಿಂಗಳ ಕಾಲ ಮನದಲ್ಲೇ ಆಳವಾಗಿ ಮೂಡಿದ್ದ ಆಘಟನೆ ಕ್ರಮೇಣ ನನ್ನ ಸಿನೆಮಾ ಯಾವುದಾಗಬೇಕೆಂಬುದರ ಬಗ್ಗೆ ಅಸ್ಪಷ್ಟವಾಗಿ ಮೂಡತೊಡಗಿತು.



ಹೀಗೆ ಪ್ರಾರಂಭವಾದ ‘ಹರಿವು’ ಹಲವಾರು ಅಡೆತಡೆಗಳನ್ನು ದಾಟಿ ಇಂದು ನನ್ನ ಇಷ್ಟು ವರ್ಷಗಳ ಕನಸನ್ನು ನನಸಾಗಿಸುತ್ತಿದೆ. ಎಲ್ಲಿ ನನ್ನ ಕನಸಿಗೆ ರೆಕ್ಕೆ ಪುಕ್ಕ ಮೂಡುತ್ತಾ ಸಾಗುತ್ತಾ ಬಂದಿತ್ತೋ ಅಲ್ಲೇ ಈ ವರ್ಷ ನಮ್ಮ ‘ಹರಿವು’ ಪ್ರದರ್ಶಿತವಾಗುತ್ತಲಿದೆ. ಈ ಕನಸು ನನಸಾಗುವಲ್ಲಿ ನಮ್ಮ ತಂಡದ ಪ್ರತಿಯೊಬ್ಬರ ಶ್ರಮವು ಮುಖ್ಯವಾಗುತ್ತದೆ. ನಮ್ಮ ತಂಡವಿಲ್ಲದೆ ಖಂಡಿತ ಇದು ಸಾಧ್ಯವಾಗುತ್ತಿರಲಿಲ್ಲ. ಇದರ ಪೂರ್ತಿ ಶ್ರೇಯಸ್ಸು ನಮ್ಮ ಇಡೀ ತಂಡಕ್ಕೆ ಸಲ್ಲುತ್ತದೆ.
ಸ್ಥಳ ಹಾಗೂ ಸಮಯದ ಅಭಾವದಿಂದ ಸಾಕಷ್ಟು ಮಿತ್ರರನ್ನು ನಮ್ಮ ಸಿನೆಮಾದ ಪೂರ್ವಭಾವಿ ಪ್ರದರ್ಶನಕ್ಕೆ ಆಹ್ವಾನಿಸಲಾಗಿರಲಿಲ್ಲ. ಅಲ್ಲಿ ತಪ್ಪಿಸಿಕೊಂಡವರು ಹಾಗೂ ಉಳಿದ ನಿಮಗೆಲ್ಲರಿಗೂ ವಿನಯಪೂರ್ವಕವಾದ ಆಹ್ವಾನ ದಯವಿಟ್ಟು ಈ ಬಾರಿಯ ಚಲನ ಚಿತ್ರೋತ್ಸವಕ್ಕೆ  ಬಂದು ನೋಡಿ ನಮ್ಮ ಈ ಚೊಚ್ಚಲ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ.

-ಮಂಸೋರೆ