Monday, November 17, 2014

ಕನಸು ನನಸಾದ ದಿನ

ನಾನೂ ಸಿನೆಮಾ ನಿರ್ದೇಶನ ಮಾಡಬೇಕೆಂಬ ಕನಸು ಮೊಳಕೆಯೊಡೆದದ್ದೇ, ಮೊದಲ ಬಾರಿಗೆ ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾಗ. ಬೆಂಗಳೂರು ಹೊರತು ಪಡಿಸಿ ಬೇರೆಲ್ಲೂ ಭಾಗವಹಿಸದಿದ್ದರೂ, ಇಲ್ಲಿನ ಚಿತ್ರೋತ್ಸವಕ್ಕೆ ಪ್ರತೀ ಬಾರಿ ಹೋದಾಗಲೂ,  ಅಲ್ಲಿ ಪ್ರದರ್ಶಿತವಾಗುತ್ತಿದ್ದ ಜಗತ್ತಿನ ನಾನಾ ದೇಶಗಳ ಅದ್ಬುತ ಸಿನೆಮಾಗಳನ್ನು ನೋಡುತ್ತಿದ್ದಾಗ ಮುಂದಿನ ಬಾರಿಯಾದರೂ ನನ್ನ ಸಿನೆಮಾ ಇಂತಹ ಸಿನೆಮಾಗಳ ಮಧ್ಯೆ ಪ್ರದರ್ಶಿಸುವಂತಿದ್ದರೆ ಎಂಬ ಆಸೆ ಚಿಗುರೊಡೆಯುತ್ತಲೇ ಬಂತು. ಈ ಆಸೆಯನ್ನು ಅಪ್ಪನೊಂದಿಗೆ ಬಹಳಷ್ಟು ಬಾರಿ ಹೇಳಿಕೊಂಡಿದ್ದೆ. ಅದಕ್ಕಾಗಿ ತುಂಬಾ ಪ್ರಯತ್ನ ಪಟ್ಟಿದ್ದೆ. ಅದಕ್ಕೆ ಅಪ್ಪನ ಮುಕ್ತ ಬೆಂಬಲವೇ ನನಗೆ ದೊಡ್ದ ಶಕ್ತಿಯಾಗಿತ್ತು. ಹಾಗಾಗಿ ನನ್ನಾಸೆ ಈಡೇರಿಸಿಕೊಳ್ಳಲು ೨೦೦೯ರಲ್ಲೇ ಪ್ರಯತ್ನಿಸಿದನಾದರೂ ಅದು ಈಡೇರದೆ ಪ್ರಾರಂಭವಾಗುವ ಮೊದಲೇ ಪರಿಸಮಾಪ್ತಿಯಾಗಿತ್ತು.. ಆ ನಂತರ ೨೦೧೦ರಲ್ಲಿ ನನಗೆದುರಾದ ದೊಡ್ಡ ಆಘಾತ.. ಅಪ್ಪ ಭೌತಿಕವಾಗಿ ನನ್ನ ಬಿಟ್ಟು ಹೋದದ್ದು. ಆನಂತರ ಬಹುತೇಕ ನನ್ನ ಸಿನೆಮಾ ಕನಸನ್ನು ಅಲ್ಲೇ ಚಿವುಟಿ ಹಾಕಿ ಅನಿರೀಕ್ಷಿತವಾಗಿ ಎದುರಾಗಿದ್ದ ಜವಾಬ್ದಾರಿಯ ಕಡೆಗೆ ಗಮನ ಹರಿಸಲು ಪ್ರಾರಂಭಿಸಿದೆ. ಆದರೆ ಒಳಗಿನ ಆಸೆ/ಕನಸು ಹಾಗೂ ಅಪ್ಪನೊಂದಿಗೆ ಮಾಡಿದ್ದ ವಾದ ಹಂಚಿಕೊಂಡಿದ್ದ ಕನಸು, ಕೊಟ್ಟಿದ್ದ ಮಾತು ಒಳಗೊಳಗೆ ಸಿನೆಮಾ ನಿರ್ದೇಶನದ ಆಸೆಯನ್ನು ಹಾಗೆ ಜೀವಂತವಾಗಿರಿಸಿತ್ತು. ಇಂತಹ ಗೊಂದಲದ ಮಧ್ಯೆ ಡಾ.ಆಶಾ ಬೆನಕಪ್ಪನವರ ಅಂಕಣವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ನನ್ನ ಕಣ್ಣಿಗೆ ಬಿತ್ತು. ಅದನ್ನು ಓದುತ್ತಾ ಹೋದಂತೆ ನನ್ನ ನಾನೇ ಪ್ರಶ್ನಿಸಿಕೊಳ್ಳುತ್ತಾ, ನನ್ನ ಜೀವನದೊಂದಿಗೆ ತಳುಕು ಹಾಕುತ್ತಾ ಸಾಗಿದೆ. ಸುಮಾರು ಮೂರು ತಿಂಗಳ ಕಾಲ ಮನದಲ್ಲೇ ಆಳವಾಗಿ ಮೂಡಿದ್ದ ಆಘಟನೆ ಕ್ರಮೇಣ ನನ್ನ ಸಿನೆಮಾ ಯಾವುದಾಗಬೇಕೆಂಬುದರ ಬಗ್ಗೆ ಅಸ್ಪಷ್ಟವಾಗಿ ಮೂಡತೊಡಗಿತು.



ಹೀಗೆ ಪ್ರಾರಂಭವಾದ ‘ಹರಿವು’ ಹಲವಾರು ಅಡೆತಡೆಗಳನ್ನು ದಾಟಿ ಇಂದು ನನ್ನ ಇಷ್ಟು ವರ್ಷಗಳ ಕನಸನ್ನು ನನಸಾಗಿಸುತ್ತಿದೆ. ಎಲ್ಲಿ ನನ್ನ ಕನಸಿಗೆ ರೆಕ್ಕೆ ಪುಕ್ಕ ಮೂಡುತ್ತಾ ಸಾಗುತ್ತಾ ಬಂದಿತ್ತೋ ಅಲ್ಲೇ ಈ ವರ್ಷ ನಮ್ಮ ‘ಹರಿವು’ ಪ್ರದರ್ಶಿತವಾಗುತ್ತಲಿದೆ. ಈ ಕನಸು ನನಸಾಗುವಲ್ಲಿ ನಮ್ಮ ತಂಡದ ಪ್ರತಿಯೊಬ್ಬರ ಶ್ರಮವು ಮುಖ್ಯವಾಗುತ್ತದೆ. ನಮ್ಮ ತಂಡವಿಲ್ಲದೆ ಖಂಡಿತ ಇದು ಸಾಧ್ಯವಾಗುತ್ತಿರಲಿಲ್ಲ. ಇದರ ಪೂರ್ತಿ ಶ್ರೇಯಸ್ಸು ನಮ್ಮ ಇಡೀ ತಂಡಕ್ಕೆ ಸಲ್ಲುತ್ತದೆ.
ಸ್ಥಳ ಹಾಗೂ ಸಮಯದ ಅಭಾವದಿಂದ ಸಾಕಷ್ಟು ಮಿತ್ರರನ್ನು ನಮ್ಮ ಸಿನೆಮಾದ ಪೂರ್ವಭಾವಿ ಪ್ರದರ್ಶನಕ್ಕೆ ಆಹ್ವಾನಿಸಲಾಗಿರಲಿಲ್ಲ. ಅಲ್ಲಿ ತಪ್ಪಿಸಿಕೊಂಡವರು ಹಾಗೂ ಉಳಿದ ನಿಮಗೆಲ್ಲರಿಗೂ ವಿನಯಪೂರ್ವಕವಾದ ಆಹ್ವಾನ ದಯವಿಟ್ಟು ಈ ಬಾರಿಯ ಚಲನ ಚಿತ್ರೋತ್ಸವಕ್ಕೆ  ಬಂದು ನೋಡಿ ನಮ್ಮ ಈ ಚೊಚ್ಚಲ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ.

-ಮಂಸೋರೆ

Sunday, August 24, 2014

ಇದು ಸೋಲಾ ಅಥವಾ ಸಾಧಿಸಿದೆನಾ?

ಪಿತಾಜಿ,,
ನಾಲ್ಕು ವರ್ಷಗಳು ಕಳೆದೇ ಹೋಯ್ತು.. ನಿಮ್ಮ ನೆನಪುಗಳು ಮಾತ್ರ ಹಾಗೇ ಉಳಿದಿವೆ.. ಮೊದಲಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.. ಪ್ರೀತಿಯ ಅಲೆಯಲ್ಲಿ ಮುಳುಗಿ ಹೋಗಿ ನಿಮ್ಮ ನೆನಪು ಹಾಗೂ ಅದು ನೀಡುತ್ತಿದ್ದ ಆತ್ಮ ಸ್ಥೈರ್ಯವನ್ನು ಕಡೆಗಣಿಸಿಯೇ ಈ ಒಂದು ವರ್ಶ ಕಳೆದು ಬಿಟ್ಟೆ. ಅದು ಒಂಟಿತನದಿಂದ ಮೂಡಿದ ಅಸಹಾಯಕತೆಯಾ? ಅಥವಾ ಈ ಮನಸಿನ ಹೆಸರಲ್ಲಿ ಅನುಭವಿಸಿದ ದೇಹ ದೌರ್ಬಲ್ಯವಾ ಗೊತ್ತಿಲ್ಲ.. ಆದರೂ ಪ್ರೀತಿಯ ಹೆಸರಿನಿಂದಾಗಿ ಬಹು ಪಾಲು ಸಮಯವನ್ನು ಅದನ್ನು ಉಳಿಸಿಕೊಳ್ಳುವ ಬರದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದೆ. ಆ ನೋವಿನಿಂದಾಗಿ ಹುಚ್ಚನಾಗಿ ಅಲೆದೂ ಬಿಟ್ಟೆ.. ಆ ಮೂರು ದಿನಗಳು ರೈಲಿನಲ್ಲಿ ಅಲೆಮಾರಿಯಂತೆ, ಹುಚ್ಚನಂತೆ, ಜನ್ರಲ್ ಕಂಪಾರ್ಟ್ನಲ್ಲಿ ಕೂತು ಇಲ್ಲಿಂದ ನಾಂದೇಡ್, ಅಲ್ಲಿಂದ ಇಟಾರ್ಸಿ.. ಮತ್ತೆ ವಾಪಸ್ಸು ಬೆಂಗಳೂರು..
ಆದರೂ ಮನಸ್ಸಿನ ಮೇಲೆ ಹಿಡಿತ ಸಾಧಿಸಲಾಗಲಿಲ್ಲ. ನಿಜಕ್ಕೂ ನಾನು ಪ್ರೀತಿಯನ್ನು ಉಳಿಸಿಕೊಳ್ಲಲು ಒದ್ದಾಡಿದ್ದಾ ಅಥವಾ ಆಕೆಗೆ ಏನಾಗುತ್ತದೆಯೋ ಎಂಬ ಆತಂಕದಲ್ಲಿ ನನಗೆ ಎಷ್ಟೇ ನೋವಾದರೂ ತಡೆದುಕೊಂಡೆನಾ? ಅಥವಾ ಅದು ನನ್ನ ದೌರ್ಬಲ್ಯವಾ ಒಂದೂ ಅರ್ಥವಾಗುತ್ತಿಲ್ಲ. ಅರ್ಥವಾಗಿರುವುದು ಇಷ್ಟೇ.. ಈ ಪ್ರೀತಿಗಾಗಿ ಇಷ್ಟು ವರ್ಷಗಳು ಪಾಲಿಸಿಕೊಂಡು ಬಂದಿದ್ದ ಎಷ್ಟೊ ಸಿದ್ದಾಂತಗಳಿಗೆಲ್ಲ ಹೊದಿಕೆ ಹೊದಿಸಿಬಿಟ್ಟು ಆಕೆಗೆ ಸಾಕಷ್ಟು ಸಮಯ ಮೀಸಲಿರಿಸಲು ಒದ್ದಾಡಿದೆ.
ಇಷ್ಟೆಲ್ಲಾ ಒದ್ದಾಟಗಳ ನಡುವೆಯೂ ಇಂದು ಈ ಹಂತದವರೆಗೆ ಬಂದು ಮುಟ್ಟಿದ್ದೇನೆ.

ನಿಮಗಾಗಿ ಹಾಗೂ ನಿಮ್ಮ ನೆನಪಲ್ಲಿ ಮಾಡಬೇಕೆಂದು ನಿರ್ಧರಿಸಿದ್ದ ‘ಹರಿವು’ ಇನ್ನು ಕೆಲವು ಘಂಟೆಗಳಲ್ಲಿ ಮದ್ರಾಸಿನ ಕ್ಯೂಬ್ ಆಫೀಸ್ ಮುಟ್ಟುತ್ತದೆ. ಕಾಕತಾಳೀಯವೋ ಎಂಬಂತೆ ನನ್ನ ಕೈಯಿಂದ ಧನುಶ್ ಕೈಗೆ ಸೌಂಡ್ ಸಿಡಿ ಕೊಟ್ತ ಸಮಯ ನೀವು ಉಸಿರು ತೊರೆದ ಸಮಯ ಆಸುಪಾಸು ಒಂದೇ ಆಗಿತ್ತು.

ನನ್ನಿಂದಲೋ ಅಥವಾ ನನ್ನ ನಿರ್ಧಾರ ಆಯ್ಕೆಗಳಲ್ಲಿದ್ದ ಲೋಪವೋ.. ಅಂದುಕೊಂಡಂತೆ ೨೪ ರಂದು ಮೊದಲ ಪ್ರದರ್ಶನ ಏರ್ಪಡಿಸಲು ಸಾಧ್ಯವಾಗದೇ ಸೋತು ಬಿಟ್ಟೆ.
ಆದರೆ ಇಲ್ಲಿವರೆಗೂ ಬಂದು ತಲುಪುತ್ತದೆ ಎಂಬ ನಂಬಿಕೆಯಿಲ್ಲದೆಯೇ ‘ಹರಿವು’ ಸೆನ್ಸಾರ್ ಆಗುವ ಕೊನೆಯ ಪ್ರಕ್ರಿಯೆಯಲ್ಲಿದೆ.. ಅದಾದರೂ ಅಂದುಕೊಂಡಂತೆ ಪೂರ್ಣಗೊಳ್ಳುವುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕೈಲಾದಷ್ಟೂ ಕೊನೆಯ ಹಂತದವರೆಗೂ ಹೋರಾಡುತ್ತೇನೆ. ಕಾಸೊಂದಿದ್ದರೆ ಇದೆಲ್ಲ ಸಮಯಕ್ಕೆ ಸರಿಯಾಗಿ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈಗದೆಲ್ಲಾ ಚಿಂತಿಸುವಷ್ಟು ಸಮಯ ಉಳಿದಿಲ್ಲ. ಏನಾದರಾಗಲಿ ಈ ‘ಹರಿವು’ ಪೂರ್ಣಗೊಳ್ಲಲೇ ಬೇಕು.

ಇದನ್ನು ಹತ್ತು ಜನರಿಗೆ ತೋರಿಸುವುದರ ಮೂಲಕ ಬರುವ ಪ್ರತಿಕ್ರಿಯೆಗಳಲ್ಲಿ ನಿಮ್ಮ ಇರುವನ್ನು ಶಾಶ್ವತಗೊಳಿಸಬೇಕು ಎಂಬ ನನ್ನ ನಿರ್ಧಾರ ಪೂರ್ಣಗೊಳ್ಳಲೇ ಬೇಕು.. ಹೋರಾಟ ಸಾಗಿದೆ.. ಇದರ ಫಲಿತಾಂಶ ನೀವೆ ನಿರ್ಧರಿಸಿ.. ಅಲ್ಲಿಯವರೆಗೂ ನನ್ನೊಳಗೆ ಇದು ಸೋಲಾ? ಅಥವಾ ಅಂದುಕೊಂಡದ್ದನ್ನು ಸಾಧಿಸಿದೆನಾ ಎಂಬ ಜಿಜ್ಞಾಸೆ ಮುಂದುವರೆಯುತ್ತಲೇ ಇರಲಿ

ಇತೀ ನಿಮ್ಮ
ಬಾಬು/ ನಾನ್ನ

Tuesday, February 4, 2014

ಎರಡು ಹೈದ್ರಾಬಾದಿ ಬಿರ್ಯಾನಿ, ಒಂದು ಫುಲ್ ಪ್ಲೇಟ್ ಕಬಾಬು

ವ್ಯಕ್ತಿ೧ : ಈ ಮುಸ್ಲಿಮ್ಮರು ಭಾರತಕ್ಕೆ ಬಂದು ನಮ್ ಹಿಂದು ಸಂಸ್ಕೃತಿನೇ ಹಾಳಾಗೋಯ್ತು...

ವ್ಯಕ್ತಿ೨ : ಹೌದು .. ಇವರು ನಮ್ ಹಿಂದುಗಳನ್ನೆಲ್ಲಾ ಬಲವಂತವಾಗಿ ಮತಾಂತರ ಮಾಡಿದ್ರು.. ನಮ್ ಸಂಪತ್ತನ್ನೆಲಾ ದೋಚಿದ್ರು.. ದೇವಸ್ಥಾನಗಳನ್ನೆಲ್ಲಾ ಹೊಡೆದು .. ತಮ್ಮ ಮಸೀದಿ ಕಟ್ಟಿಕೊಂಡ್ರು.. ಆದರೂ ನಾವ್ ಏನ್ ಮಾಡಕ್ಕಾಗ್ಲಿಲ್ಲ..

ವ್ಯಕ್ತಿ೧ : ಅಷ್ಟಾದ್ರೂ ... ಈ ನನ್ *** ಸಾಕಾಗ್ಲಿಲ್ಲ. ಇಂಡಿಯಾ ಡಿವೈಡ್ ಆದಾಗ ಇವ್ರಿಗೆ ಅಂತ ಬೇರೆ ದೇಶನೆ ಕೊಟ್ಟು ಹಾಳಾಗೋಗಿ ಅಂತಂದ್ರೆ .. ಅಲ್ಲಿಗೂ ಪೂರ್ತಿಯಾಗಿ ತೊಲಗ್ಲಿಲ್ಲ.. ಏನೋ ಅವ್ರಪ್ಪನ ಆಸ್ತಿ ಅನ್ನೋ ತರಾ ಕೆಲವ್ರು ಇಲ್ಲೇ ಝಂಡಾ ಊರ್ಕೊಂಡು ಕೂತ್ಬಿಟ್ರು.. 

ವ್ಯಕ್ತಿ೨ : ಕೂತ್ಕೊಂಡವ್ರು..  ಅದಿಮ್ಕಂಡು ಇರೋದು ಬಿಟ್ಟು ಪಾಕಿಸ್ತಾನದವ್ರ್ ಜೊತೆ ಸೇರ್ಕೊಂಡ್ ಇಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡ್ತಿದ್ದಾರೆ... 

ವ್ಯಕ್ತಿ೧ : ಇವ್ರು ಮಾಡಿರೋ ರಾದ್ಧಾಂತಗಳು ಒಂದಾ ಎರಡಾ.. ಇಡೀ ನಮ್ ಹಿಂದೂ ಸಂಸ್ಕೃತೀನೆ ಹಾಳ್ ಮಾಡ್ಬಿಟ್ಟಿದ್ದಾರೆ...

ವ್ಯಕ್ತಿ ೩ : ಏನ್ ನೀವಿಬ್ರು ಹೇಳ್ತಿರೋದು.. ನಿಜ್ವಾಗ್ಲು ಇಷ್ಟೆಲ್ಲಾ ಮಾಡಿದ್ದಾರ ಮುಸ್ಲಿಮ್ಮೋರು..

ವ್ಯಕ್ತಿ ೧ : ಹೂ ಅಂತೀನೀ .. ಹೇಳ್ತಾ ಹೋದ್ರೆ ಘಂಟೆ, ದಿನಾ ಅಲ್ಲಾ,, ತಿಂಗಳು .. ವರ್ಷಗಳೇ ಬೇಕಾಗುತ್ತೆ ಆ ***** ಳು ಮಾಡಿರೋ ಹಲ್ಕಾ ಕೆಲಸಗಳ ಬಗ್ಗೆ ಹೇಳೋದಿಕ್ಕೆ..

ವ್ಯಕ್ತಿ ೩ : ಹೌದಾ ನನಗೂ ತಿಳ್ಕೋಬೇಕು ಅನ್ನೋ ಆಸೆ ಇದೆ.. ಆದರೆ ನೀವ್ ಹೇಳ್ತಿರೋದು ನೋಡಿದ್ರೆ  ಕೇಳಿಸ್ಕೊಳ್ಳೋದಿಕ್ಕೆ ತುಂಬಾನೆ ಟೈಮ್ ಬೇಕಾಗುತ್ತೆ ಅನ್ಸುತ್ತೆ.. ಮೊದ್ಲು ಊಟ ಆರ್ಡರ್ ಮಾಡಿಬಿಡೋಣ .. ಆಮೇಲೆ ಎಷ್ಟೊತ್ತಾದ್ರು ಮಾತಾಡ್ಬಹುದು..

ವ್ಯಕ್ತಿ ೧: ಹೌದು ಅದೂ ಸರೀನೆ.. (ಮಾಣಿ ನ ಕರೀತಾರೆ)

ಮಾಣಿ : ಏನ್ ಬೇಕ್ ಸರ್...?

ವ್ಯಕ್ತಿ ೩ : ನನಗೆ ಸೌತ್ ಇಂಡಿಯನ್ ಮಿಲ್ಸ್ ಸಾಕು..

(ವ್ಯಕ್ತಿ೧ ಮತ್ತು ವ್ಯಕ್ತಿ೨ ಪರಸ್ಪರ ನೋಡಿ ನಗ್ತಾರೆ)

ವ್ಯಕ್ತಿ ೨: ಈ ಹೋಟೆಲ್ ಗ್ ಬಂದು ಅನ್ನ ಸಾಂಬರ್ರು ಆರ್ಡರ್ ಮಾಡ್ತೀರಲ್ರೀ (ವ್ಯಂಗ್ಯ ನಗುವಿನೊಂದಿಗೆ)

ವ್ಯಕ್ತಿ ೧ : ಈ ಹೊಟ್ಲು ಬಿರಿಯಾನಿಗೆ ಫೇಮಸ್ಸು, ನೀವ್ ನಾನ್ವೆಜ್ ತಿಂತೀರಾ ತಾನೆ?

ವ್ಯಕ್ತಿ ೩: ಹೂ.. 

ವ್ಯಕ್ತಿ ೧: ಹಾಗಿದ್ರೆ ಇಲ್ಲಿ ನೀವು ಬಿರಿಯಾನಿ ಟೇಸ್ಟ್ ಮಾಡ್ಲೇ ಬೇಕು.. (ಮಾಣಿ ಕಡೆಗೆ ತಿರುಗಿ) ಎರಡು ಹೈದ್ರಾಬಾದಿ ಬಿರ್ಯಾನಿ, ಒಂದು ಫುಲ್ ಪ್ಲೇಟ್ ಕಬಾಬು, (ವ್ಯಕ್ತಿ ೨ ಕಡೆಗೆ ತಿರುಗಿ) ನಿಮಗೆ ಏನ್ ಬೇಕೋ ಹೇಳ್ಬಿಡಿ..

ವ್ಯಕ್ತಿ ೨: ನನಗೂ ಒಂದು ಬಿರಿಯಾನಿ... ಜೊತೆಗೆ ಒಂದು ಫುಲ್ ತಂದೂರಿ, ಮತ್ತೆ ಮೊಘ್ಹಲಾಯಿ ಚಿಕನ್ನು.. ಸ್ಪೈಸಿಯಾಗಿ ಇರ್ಬೇಕು.. ಆಯ್ತಾ....

(ಮಾಣಿ ಹೋಗ್ತಾನೆ)

ವ್ಯಕ್ತಿ ೧ : ಆ ನಾನ್ ಏನ್ ಹೇಳ್ತಾ ಇದ್ದೆ.. ಆ ಸಂಸ್ಕೃತಿ... ಹೌದು..... ಈ ನನ್ ***** ಳು ಬಂದು ನಮ್ ಹಿಂದೂ ಸಂಸ್ಕೃತೀನೆ ಹಾಳ್ ಮಾಡ್ಬಿಟ್ರೂ..........................................................