Wednesday, February 10, 2010

ಸಂಖ್ಯೆ ೧೪

ಮೊಬೈಲ್ ರಿಂಗಾಗ್ತಿತ್ತು...

ಅದು ಮೆಸೇಜ್ ರಿಂಗ್ ಟೋನ್...

ಲೆಕ್ಕ ಹಾಕ್ತಿದ್ದ 10...

ಗೂಡ್ ಶೆಡ್ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್ , ಗಾಡಿ ಸೈಡ್ಗೆ ಹಾಕೋದಿಕ್ಕು ಆಗ್ತಾ ಇಲ್ಲ... ಸಿಗೋ ಸಣ್ಣ ಪುಟ್ಟ ಗ್ಯಾಪ್ನಲ್ಲಿ ಗಾಡಿ ನುಗ್ಗಿಸ್ಕೊಂಡು ಹೋಗ್ತಾ ಇದ್ದ ಅವನು...

ಅವನಿಗೊತ್ತು ಅದು ರೇಖಾ ಕಳಿಸ್ತಿರೋ ಮೆಸೇಜ್.. ಅಮರ್ ಹೋಟೆಲ್ ಮುಂದೆ ಇರುವ ದೇವಸ್ಥಾನದ ಹತ್ತಿರ ಕಾಯ್ತಾ ಇದ್ದಾಳೆ...

ಛೇ ಈ ಸಿಗ್ನಲ್ ಈಗ್ಲೇ ಬೀಳ್ಬೇಕಿತ್ತಾ...

ಗಾಡಿ ಆಫ್ ..

ರೇಖಾ ಜೊತೆ ಲಾಂಗ್ ಡ್ರೈವ್ ಹೋಗ್ಬೇಕಲ್ಲ ಪೆಟ್ರೋಲ್ ಇರ್ಲಿ...

ಮೂರು ವರ್ಷಗಳ ಪ್ರಯತ್ನದ ಫಲ ಇವತ್ತು ಬೆಳಗ್ಗೆ ಸಿಕ್ಕಿತ್ತು..

ಭಾನುವಾರದ ಬೆಳಗ್ಗೆ ಆಗಿದ್ರಿಂದ ಹಾಸಿಗೆಯಲ್ಲಿ ಮಲಗಿದ್ದೋನಿಗೆ ದಿನಾ ಏಳಕ್ಕೆ ಹೊಡ್ಕೊಳ್ಲೋ ಅಲಾರಂ ಹತ್ತು ಘಂಟೆವರೆಗೂ ಬಡ್ಕೊಳ್ತಾ ಇದ್ರೂ ಎಚ್ಚರಾನೆ ಇರ್ಲಿಲ್ಲಾ.. ಆದ್ರೆ ಮೊಬೈಲ್ನಲ್ಲಿ ಮೆಸೇಜ್ ಬಂದ್ ತಕ್ಷಣ ಅಚಾನಕ್ಕಾಗಿ ಎಚ್ಚರವಾಗೋಗಿತ್ತು..

ಓಪನ್ ಮಾಡಿ ನೋಡಿದ

neenandre nanage thumbaa ista..

lve u..

ಕಣ್ಣ್ ಉಜ್ಕೊಂಡ್ ಮತ್ತೆ ಸ್ಕ್ರೋಲ್ ಡೌನ್ ಮಾಡಿ ನೋಡಿದ

ನಂಬಕ್ಕಾಗ್ಲಿಲ್ಲ ಅದೇ ನಂಬರ್..

ಮೂರು ವರ್ಷಗಳಿಂದ ಎಷ್ಟು ಟ್ರೈ ಮಾಡಿದ್ರು ಒಂದ್ಸರೀನೂ ಮಾತಾಡಿಸೋದಿರ್ಲಿ ತಿರುಗೀನೂ ನೋಡಿರ್ಲಿಲ್ಲ.. ಅಂತದ್ದು..

ರೀ ಎಲ್ರೀ ನುಗ್ತೀರಾ ಸಿಗ್ನಲ್ ಹಾಕಿರೋದು ಕಾಣಿಸ್ತಿಲ್ವಾ...

ಪಕ್ಕದಲ್ಲಿ ಕಿರಾಚಾಡ್ತಿದ್ದಾನೆ XL ಮೇಲೆ ಹ್ಯಾಂಡಲ್ ಹಿಡ್ಕೊಳ್ಳೋದಿಕ್ಕು ಜಾಗ ಇಲ್ದಂಗೆ ಪೇಪರ್ಸ್ ಬಂಡಲ್ ತುಂಬ್ಕೊಂಡಿರೋ ಪಾರ್ಟಿ...

ಮತ್ತೆ ರಿಂಗಾಯ್ತು 11

ಯಾಕೋ ಇವತ್ತು ಸಿಗ್ನಲ್ಲ್ ತುಂಬಾ ಧೀರ್ಘ ಅನ್ನಿಸ್ತಿತ್ತು ಅವನಿಗೆ..

ಕಾಟನ್ ಪೇಟೆ ಒಳಗಡೆಯಿಂದಾದ್ರು ಬರ್ಬೇಕಿತ್ತು...

ಆಗ್ಲೇ ಅರ್ಧ ಘಂಟೆ ಲೇಟಾಗಿದೆ...

ಪರ್ವಾಗಿಲ್ಲ ಹೆಂಗೋ ಮ್ಯಾನೇಜ್ ಮಾಡೋಣ...

ಎರೆಡು ಐಸ್ಕ್ರೀಮ್ ಎಕ್ಸಟ್ರಾ ಕೊಡಿಸಿದ್ರಾಯ್ತು... ಕೂಲ್ ಆಗ್ತಾಳೆ.

ತಕ್ಷಣ ಎದ್ದು ಕೂತ... ಆ ನಂಬರ್ಗೆ ಡಯಲ್ ಮಾಡ್ದ..

ಆಕಡೆ ರಿಂಗಾಗ್ತಾ ಇದ್ದಾಗ ನೆನಪಾಯ್ತು ನಿನ್ನೆ ಸೌಮ್ಯ ನಾಳೆ ನಿನಗೆ ಸರ್ಪ್ರೈಸ್ ಇದೆ ಅಂತ.. ಅದು ಇದಾ....

ಹಲೋ.. ಆ ಕಡೆ ಮೌನ..

ಮತ್ತೆ ಹಲೋ..

ಮೌನ..

ಮತ್ತೆ ಹ... ಹೆಲೋ ಆಕಡೆಯಿಂದ ಇಂಪಾಗಿ ಕೇಳಿಸಿತ್ತು ರೇಖಾ ಧ್ವನಿ..

ಆ ನಂತರ ಕರೆನ್ಸಿ ಖಾಲಿ ಆಯ್ತೋ ಬ್ಯಾಟರಿ ಖಾಲಿ ಆಯ್ತೋ ಗೊತ್ತಿಲ್ಲ.. ಕಾಲ್ ಕಟ್ ಆಯ್ತು..

1.30 ಗೆ ಅಮರ್ ಹೋಟೆಲ್ ಮುಂದಿರೋ ದೇವಸ್ಥಾನದ ಬಳಿ ಮೀಟ್ ಆಗೋದಂತ ಫಿಕ್ಸ್ ಆಗಿತ್ತು.

ಇವ್ನು ಎದ್ದು ರೆಡಿ ಆದೋವ್ನೆ ಗಾಡಿ ತಗೊಂಡು ಸೀದಾ ಪಿವಿಆರ್ ಗೆ ಹೋಗಿ ಟಿಕೆಟ್ ತಗೊಂಡು ಮತ್ತೆ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರೋಷ್ಟ್ರಲ್ಲಿ ಲೇಟಾಗಿತ್ತು.. ಅದರಲ್ಲಿ ಈ ಟ್ರಾಫಿಕ್ ಜಾಮ್ ಬೇರೆ..

ಹಿಂದೆಯಿಂದ ಒಂದೇ ಸಮನೆ ಬಡ್ಕೊಳ್ತಾ ಇದ್ದ ಹಾರನ್ ಗದ್ದಲ ಸಿಗ್ನಲ್ ಬಿಟ್ಟಿರೋದನ್ನ ಕನ್ಫರ್ಮ್ ಮಾಡ್ತು.

ಗಾಡಿ ಸ್ಟಾರ್ಟ್ ಆಯ್ತು... ಗೇರ್ ಮುಂದಕ್ಕೆ ಒತ್ತಿದ..

ಮತ್ತೆ ರಿಂಗಾಯ್ತು 12

ಛೇ!! ಏನ್ ಹುಡ್ಗೀರಪ್ಪಾ ಗ್ಯಾಪ್ ಇಲ್ದೀರಾ ಮೆಸೇಜ್ ಕಳಿಸ್ತಾರೆ..

ಬಿಎಂಟಿಸಿ ಪಕ್ಕ ಇರೋ ಗ್ಯಾಪಲ್ಲಿ ನುಗ್ಗಿಸಿದ...

ಉಪ್ಪಾರಪೇಟೆ ಪೋಲೀಸ್ ಸ್ಟೇಷನ್ ಕಾರ್ನರ್ ಹತ್ತಿರ ಬರೋಷ್ಟೊತ್ತಿಗೆ,

ಮತ್ತೊಂದು ರಿಂಗ್ 13

ಮುಂದೆ ಸಿಗ್ನಲ್ ಗ್ರೀನ್ ಲೈಟ್ ಇತ್ತು,

ಬೇಗ ಹೋಗ್ಬಿಡೋಣ...

ಓ ಮತ್ತೆ ಸಿಗ್ನಲ್ .. ಮಾಮ ಆಕಡೆ ನೋಡ್ತಿದ್ದಾನೆ

ಸರಿ ಜಂಪ್..

ಮತ್ತೆ ರಿಂಗಾಯ್ತು 14

ಈ ಮೊಬೈಲ್ ಯಾರ್ ಕಂಡು ಹಿಡಿದ್ರೋ ಏನೋ

ನಮ್ ಕಷ್ಟಾನೆ ಅರ್ಥ ಮಾಡ್ಕೊಳ್ಳೋದಿಲ್ಲ ಈ ಹುಡ್ಗೀರು...

ದೇವಸ್ಥಾನದ ಹತ್ತಿರ ಬಂದು ಹೆಲ್ಮೆಟ್ ತೆಗೆದು ಸುತ್ತಲೂ ನೋಡಿದ,

ಎಲ್ಲಿದ್ದಾಳೆ .. ಈ ಗುಡಿ ಹತ್ರಾನೆ ಇರು ಅಂತ ಹೇಳಿದ್ನಲ್ಲಾ ಹೋಗ್ಬಿಟ್ಳಾ

ಮೆಸೇಜ್ ಏನ್ ಕಳಿಸವ್ಳೇ .. ಜೇಬೊಳಗಿಂದ ಮೊಬೈಲ್ ತೆಗೆದ.. ಅದರ ಜೊತೆಗೆ ಬಂದ ಪಿವಿಆರ್ ಟಿಕೆಟ್ಸ್ ಕೆಳಗೆ ಬಿತ್ತು ಬಗ್ಗಿ ಹಾಗೇ ಟಿಕೆಟ್ ಎತ್ಕೊಳ್ತಾ ಮೊಬೈಲ್ ನೋಡಿದ

1.wru

2.wru

3.wru

4.wru

5.wru

6.wru

7.wru

8.wru

9.wru

10.wru

11.wru

12.wru

13.wru

14.wru

:)

ಕೈಯಲ್ಲಿರೋ ವಾಚ್ ನೋಡ್ದ 2.14

ಸುತ್ತಲೂ ನೋಡಿದ ಎಲ್ಲಿದ್ದಾಳೆ ಇವ್ಳು

ಓ ಅಲ್ಲಿ.. (ರಸ್ತೆಯ ಆ ಕಡೆ ಇದ್ಳು)

ಬಾ ..

ನಿಧಾನ..

ಅವ್ಳು ರಸ್ತೆ ದಾಟೋ ಗ್ಯಾಪಲ್ಲಿ ಮತ್ತೆ ಕನಸಿಗೆ ಜಾರಿದ...

ಹಾಗೇ ಮುಂದೆ ಅವಳ ಜೊತೆ ನೈಸ್ ರೋಡ್ನಲ್ಲಿ ಲಾಂಗ್ ಡ್ರೈವ್ ಹೋಗಿ ಹಾಗೇ ಎಲೆಕ್ಟ್ರಾನಿಕ್ ಸಿಟಿಯಿಂದ ಪಿವಿಆರ್ ಗೆ ಎಂಟ್ರಿ ಕೊಡಬೇಕಿತ್ತು..

ಕೈಯಲ್ಲಿ ಒಂದೇ ಟಿಕೆಟ್ !!! ಇನ್ನೊಂದೆಲ್ಲಿ ಓ ಅಲ್ಲಿ ಬಿದ್ದಿದೆ..

ಗಾಡಿಯಲ್ಲಿ ಕುತ್ಕೊಂಡೇ ತಗೊಳ್ಳೋದಿಕ್ಕೆ ಹೋದ..ಹಾಗೇ ಬಲಗಾಲನ್ನು ಬ್ಯಾಲೆನ್ಸ್ ಮಾಡ್ತಾ ಮುಂದಕ್ಕೆ ಸ್ವಲ್ಪ ಸ್ವಲ್ಪಾನೆ ಜರುಗಿಸುತ್ತಾ ಟಿಕೆಟ್ ಎತ್ಕೊಳ್ಲೋದಿಕ್ಕೆ ಕೈ ಮುಂಚಾಚಿದ..

ಬ್ಯಾಲೆನ್ಸ್ ತಪ್ತು.. ಹಾಗೇ ಮುಂದಕ್ಕೆ ಬಿದ್ದ..

ಧಡಾರ್..

ಇನ್ನೋವಾ ಬ್ರೇಕ್ ಹಾಕಿದ ಕಾಲ ಸ್ವಲ್ಪ ತಡವಾಗಿತ್ತು..

ರೋಡ್ ದಾಟಕ್ಕೆ ಬಂದ ರೇಖಾ ರೋಡ್ ಮಧ್ಯ ನಿಂತಲ್ಲೇ ಸ್ತಬ್ದವಾಗಿ ನಿಂತಳು...

ಅವಳ ಕಾಲ ಬಳಿಗೆ ಪಿವಿಆರ್ ಟಿಕೆಟ್ ಹಾರಿಕೊಂಡು ಬಂದು ಬಿತ್ತು.

ಕಣ್ಣು ನೆಲದೆಡೆಗೆ ನೆಟ್ಟಿತ್ತು,

ಅದು ಟಿಕೆಟ್ಟನ್ನು ನೋಡ್ತಾ ಇತ್ತ

ಅಥವಾ......