Showing posts with label ಮಂಸೋರೆ. Show all posts
Showing posts with label ಮಂಸೋರೆ. Show all posts

Friday, August 24, 2012

ಇನ್ನು ಮೂರು ಅಥವ ಐದು ವರ್ಷ

ಸರಿಯಾಗಿ ಎರಡು ವರ್ಷಗಳ ಹಿಂದೆ.. ಇಂದಿನಂತೆಯೇ ಅಂದು ಮಳೆ ಸುರಿಯುತ್ತಲೇ ಇತ್ತು.. ಮನದೊಳಗೆ ಕಟ್ಟಿದ್ದ ದುಃಖದ ಒಡಲು ಇನ್ನಷ್ಟು ದುಃಖವನ್ನು ಸೇರಿಸಿಕೊಳ್ಳುತ್ತಿತ್ತು. ಪಿತಾಜಿ ನೀವು ಇಲ್ಲಿನ ನಿಮ್ಮ ಪಾಲಿನ ಕೆಲಸಗಳನ್ನು ಮುಗಿಸಿ ಹೊರಡಲು ಅಣಿಯಾಗಿದ್ದೀರೆಂಬ ವಿಷಯ ಬೆಳಗ್ಗೇನೆ ಗೊತ್ತಾಗಿತ್ತು. ನಾವು ಅನುಮತಿಸುವುದಿಲ್ಲ ಎಂಬ ಭಾವದಿಂದಲೇ ನಮ್ಮೊಂದಿಗೆ ಮಾತಿನ ಸಂಪರ್ಕ ತೊರೆದು.. ನಿಮ್ಮ ಪಯಣದ ದಿನಗಳನ್ನು, ಮಾತುಗಳನ್ನು ಮೆಲುಕು ಹಾಕುತ್ತಿದ್ರಿ, ಅಷ್ಟು ದೈಹಿಕ ನೋವನ್ನು ಸಹಿಸಿಕೊಂಡೂ ಸಹ ನಿಮ್ಮ ಸ್ನೇಹಿತರನ್ನು ನೆನಪುಗಳನ್ನು ಮೆಲುಕು ಹಾಕುತ್ತಿದ್ರಿ. ನಾವು ನಿಮ್ಮನ್ನು ನಿಮ್ಮ ನೆಚ್ಚಿನ ವಿಧ್ಯಾಪೀಠಕ್ಕೆ ಕರೆದುಕೊಂಡು ಹೋಗುವ ತಯಾರಿಯಲ್ಲಿದ್ವಿ. ಇಷ್ಟೊತ್ತಿನಲ್ಲಿ ನಿಮಗೆ ಕೊನೆಯ ಬಾರಿ ಡಯಾಲಿಸಿಸ್ ನಡೆಯುತ್ತಿತ್ತು.ಅಕ್ಕ ಅಮ್ಮ ಅಲ್ಲೇ ಇದ್ರು. ನಿಮ್ಮ ಅಣ್ಣ ಅಣ್ನನ ಮಗ ಸೋಮ ನೂ ಇದ್ದ ಪ್ರಶಾಂತ್ ಅಲ್ಲಿಗೆ ಬಂದಿದ್ದ. ನಾನ್ಯಾವತ್ತೂ ನಿಮ್ಮ ಜವಾಬ್ದಾರಿಗಳನ್ನು ಪೂರೈಸುವಂತೆ ಭರವಸೆಯ ಕೆಲಸಗಳನ್ನು ಮಾಡಿರಲಿಲ್ಲ. ನಾನು ನನ್ನ ಕನಸುಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಅದರೆಡೆಗೆ ಮಾತ್ರ ನನ್ನ ಗುರಿ ಇತ್ತು. ಆ ಕನಸುಗಳನ್ನು ನನಸು ಮಾಡಿ ನಿಮಗೆ ತೋರಿಸಬೇಕೆಂಬ ಹಟ ಬಿಟ್ಟರೆ ನೀವು ಬಯಸಿದ್ದ ಜವಾಬ್ದಾರಿಯುತ ಮಗನಾಗಿ ಎಂದೂ ಇರಲಿಲ್ಲ.

 ನನ್ನ ಜವಾಬ್ದಾರಿಗಳಿಂದ ಯಾವಗಲು ವಿಮುಖನಾಗಿದ್ದೆ. ನೀವು ನನಗೆ ಯಾವುದೇ ಒತ್ತಡ ಹೇರದೆ, ನನ್ನ ಕನಸುಗಳಿಗೆ ಹೆಗಲು ಕೊಡುತ್ತಲೇ ಬಂದಿದ್ರಿ. ಹಾಗಿದ್ದು ಯಾವ ನಂಬಿಕೆಯ ಮೇಲೆ ಈ ಜವಾಬ್ದಾರಿಗಳನ್ನೆಲ್ಲ ನನ್ನ ಹೆಗಲಿಗೆ ವರ್ಗಾಯಿಸಿ ಹೊರಟು ಬಿಟ್ರಿ, ಈಗಿನ ಸಮಯದಿಂದ ಸರಿಯಾಗಿ ಇಪ್ಪತ್ನಾಲ್ಕು ಘಂಟೆಗಳ ನಂತರ ನೀವು ನಮಗೆ ಭೌತಿಕವಾಗಿ ಗುಡ್ ಬೈ ಹೇಳಿಬಿಟ್ರಿ. ನೀವು ಯಾವ ನಂಬಿಕೆಯ ಆಧಾರದ ಮೇಲೆ ನನಗೆ ಜವಾಬ್ದಾರಿ ಹೊರಿಸಿ ಹೊರಟರೋ ಗೊತ್ತಿಲ್ಲ. ನಾನು ಯಾವ ಜವಾಬ್ದಾರಿಯನ್ನು ಪೂರೈಸಲಾಗಲಿಲ್ಲ. ಈ ಎರಡು ವರ್ಷಗಳ ಅವಧಿಯಲ್ಲಿ ನನ್ನ ಕನಸುಗಳ ಮೂಲಕವೇ ನಿಮ್ಮ ಜವಾಬ್ದಾರಿಯನ್ನು ಪೂರೈಸೋಣ ಎಂದು ಪ್ರಯತ್ನಿಸಿ ಕೊನೆಗೂ ಗೆಲ್ಲಲಾಗದೆ ಸೋತು ಹೋದೆ. ಅದರ ಪರಿಣಾಮವನ್ನು ಎದುರಿಸುತ್ತಿದ್ದೇನೆ. ನನ್ನ ಜೀವನದ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ. ಇದನ್ನು ನಿವಾರಿಸಲೆಂದೇ ನನ್ನ ಕನಸುಗಳನ್ನು ಬದಿಗಿಟ್ಟು ಪಯಣದ ಹಾದಿಯನ್ನು ಬದಲಿಸುತ್ತಿದ್ದೇನೆ. ಆದರೂ ಧೈರ್ಯ ಸಾಲುತ್ತಿಲ್ಲ.


ಈಗಿನ ಹಾದಿಯಲ್ಲಿ ಪಯಣಿಸಿದರೂ ಎಷ್ಟು ವರ್ಷಗಳು ಬೇಕಾಗುತ್ತೋ ಗೊತ್ತಿಲ್ಲ. ಮುಂದಿನ ನನ್ನ ಜೀವನ ಎಲ್ಲಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲರಿನಂತೆ ಅದೇ ನೀರಸ ಜೀವನ ಬಾಳಲು ನನಗೆ ಇಷ್ಟ ಇಲ್ಲ. ನೀವು ಹೊರಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸಲಷ್ಟೇ ಹಾದಿಯನ್ನು ಬದಲಿಸುತ್ತಿರುವುದು. ಅದು ಇನ್ನು ಮೂರು ವರ್ಷಗಳಾಗಬಹುದು, ಅಥವ ಐದು ವರ್ಷಗಳಾಗಬಹುದು. ಆ ಜವಾಬ್ದಾರಿಗಳೆಲ್ಲ ತೀರಿ.. ಅದೇ ಹಾದಿಯನ್ನು ಮುಂದುವರೆಸಬೇಕಾದ ಅನಿವಾರ್ಯತೆ ಎದುರಾದಲ್ಲಿ. ಖಂಡಿತ ಈ ಜೀವನವನ್ನು ಮುಂದುವರೆಸುವುದಿಲ್ಲ. ನಾನು ನಿಮ್ಮನ್ನು ಸೇರಿಕೊಂಡು ಬಿಡುತ್ತೇನೆ. ಇದು ನಿಶ್ಚಿತ. ನನ್ನಂತ ಸೋತ ಮಗನಿಗೆ ಅರ್ಥವೇ ಇಲ್ಲದ ಪಯಣ ಮುಂದುವರೆಸುವುದು ನಿರರ್ಥಕ. ಈಗಿನ ಸೋಲೇ ಈ ನಿಟ್ಟಿನಲ್ಲಿ ಆಲೋಚಿಸುವಂತೆ ಮಾಡಿದ್ದರು. ನೀವು ನನ್ನ ನಂಬಿ ಬಿಟ್ಟು ಹೋದ ಕೆಲಸಗಳಿಗಾಗಿ ಈ ಹಾದಿಯಲ್ಲಿ  ಇನ್ನು ಕೆಲ ಕಾಲ ಮುಂದುವರೆಯಲು ನಿಷ್ಚಯಿಸಿದ್ದೇನೆ.
 ಇನ್ನು ಮೂರು ಅಥವ ಐದು ವರ್ಷ

ಮಂಸೋರೆ

Wednesday, August 24, 2011

ನಿಮ್ಮ ಕುರಿತೊಂದು ಕವನ ನಿಮ್ಮ ಸ್ನೇಹಿತರಿಂದ

ಪಿತಾಜಿ ಇದು ನಾನು ನಿಮ್ಮ ಮೆಚ್ಚಿನ ಸ್ಥಳವಾದ ವಿಧ್ಯಾಪೀಠದಲ್ಲಿ ಬರೆಯುತ್ತಿರುವ ಬ್ಲಾಗ್ ಇದು.. ಇದು ನಿಮಗೆಷ್ಟು ಇಷ್ಟವಾದ ಸ್ಥಳವಾಗಿತ್ತೋ ಹಾಗೇ ನನಗೆ ಈಗಿದು ನನ್ನ ಜೀವನದಲ್ಲಿ ಮುಖ್ಯ ಸ್ಥಳವಾಗಿದೆ. ಕಾರಣ ಇಂದಿಗೆ ಒಂದು ವರ್ಷವಾಯಿತು ನೀವು ನಿಮ್ಮ ಉಸಿರನ್ನು ಇಲ್ಲಿನ ಗಾಳಿಯಲ್ಲಿ ಲೀನವಾಗಿಸಿ. ನಿಮ್ಮ ಭೌತಿಕ ದೇಹ ನಮ್ಮ ’ಆ’ ಊರಿಗೆ ಹೋದರು ನಿಮ್ಮ ಉಸಿರು ಇಲ್ಲಿನ ಪ್ರತಿ ಕಣದಲೂ ಲೀನವಾಗಿದೆ. ನಿಮಗೆ ನಿಮ್ಮ ಹುಟ್ಟಿದ ಊರಿಗಿಂತಲೂ ಹೆಚ್ಚು ಆತ್ಮೀಯರು ಇರುವಂತ ಸ್ಥಳವಿದು.

ನಿಮ್ಮ ಜೀವನದ ೩೩ ವರ್ಷಗಳು ಕಳೆದಂತ ಸ್ಥಳವಿದು. ಹಾಗಾಗಿ ಇಲ್ಲಿನ ಸುತ್ತಮುತ್ತಲಿನ ಎಲ್ಲರೊಂದಿಗೂ ನಿಮಗೆ ಅಷ್ಟೇ ಆತ್ಮೀಯವಾದ ಒಡನಾಟ ಇಲ್ಲಿದೆ. ಇಲ್ಲಿನ ಜನಗಳ ಮನದಲ್ಲಿ ನಿಮಗಿರುವ ಸ್ಥಾನವನ್ನು ತಿಳಿಯಲು ನಿಮ್ಮ ಸ್ನೇಹಿತರಾದ ಮದಿರೆಪ್ಪನವರು ತಾವೇ ಸ್ವತಃ ರಚಿಸಿ ವಾಚಿಸಿದ ಈ ಕವನ ಸಾಕ್ಷಿ.




Tuesday, August 23, 2011

ನನ್ನ ನಿಮ್ಮ ಕೊನೆಯ ಸಂಭಾಷಣೆ

ಪಿತಾಜಿ ಇದು ನಾನು ನಿಮ್ಮೊಂದಿಗೆ ನಡೆಸಿದ ಕೊನೆಯ ಸಂಭಾಷಣೆ.. ಈ ಸ್ಥಿತಿಯಲ್ಲಿ ನೀವು ಬಹುತೇಕ ವಾಸ್ತವದ ಪ್ರಪಂಚವನ್ನು ಮರೆತು ನಿಮ್ಮದೆ ನೆನಪಿನ ಸುಳಿಗಳಲ್ಲಿ ಕಳೆದು ಹೋಗಿದ್ದಿರಿ. ಅಷ್ಟರಲ್ಲಾಗ್ಲೇ ನನಗೆ ಡಾಕ್ಟರ್ ಮುಂದಿನ ಸಾಧ್ಯತೆಗಳನ್ನು ವಿವರಿಸಿದ್ದರು.. ಆ ದುರ್ಬಲ ಘಳಿಗೆಯಲ್ಲಿ ನಿಮ್ಮ ನೆನಪುಗಳನ್ನು ನನ್ನಲ್ಲಿ ಸಾಧ್ಯವಾದಷ್ಟು ಶೇಖರಿಸಲು ನಾನು ಮಾಡಿಕೊಂಡ ಕೊನೆಯ ಧ್ವನಿ ಮುದ್ರಿಕೆ ಇದು..... ಅಂದು ನನ್ನ ಧ್ವನಿ ಕಂಪಿಸಿದ್ದು ನಾನು ಹೇಗೆ ಮರೆಯಲು ಸಾಧ್ಯ.


Monday, August 22, 2011

ಪಿತಾಜಿ ನೀವು ನನ್ನೊಂದಿಗೆ ಮಾತಾಡಿ ಇಂದಿಗೆ ಒಂದು ವರ್ಷ


ಪಿತಾಜಿ ದಿನಾಂಕದ ಲೆಕ್ಕದಲ್ಲಿ ಹೇಳುವುದಾದರೆ ಇಂದು.. ವಾರದ ಲೆಕ್ಕದಲ್ಲಿ ಹೇಳುವುದಾದರೆ ನಿನ್ನೆಗೆ ನೀವು ನನ್ನ ಜೊತೆ ಮಾತಾಡಿ ಒಂದು ವರ್ಷವಾಯಿತು... ಅಂದು ಭಾನುವಾರ ೨೨ ರ ಆಗಸ್ಟ್ ನೀವು ನನ್ನನ್ನೂ ಸೇರಿಸಿ ಅಕ್ಕ ಅಮ್ಮ ಮತ್ತು ನಿಮ್ಮ ಮೊಮ್ಮಗ ಬಾಬು ಸೋಮ , ಪರಿಚಯದ ಸರೋಜಮ್ಮನವರನ್ನು ಸೇರಿಸಿ ನಮ್ಮೆಲ್ಲರನ್ನು, ನಮ್ಮನ್ನು ನಾವಾಗಿ ಗುರುತಿಸಿ ಮಾತಾಡಿದ್ದು. ಎಲ್ಲರನ್ನು ಕಳಿಸಿದ ನಂತರ ಕೊನೆಯಲ್ಲಿ ಮಧ್ಯಾಹ್ನದ ವಿಸಿಟಿಂಗ್ ಟೈಮಲ್ಲಿ ಕೊನೆಯಲ್ಲಿ ಉಳಿದದ್ದು ನಾನೊಬ್ಬನೆ.. ಇವತ್ತಿಗೂ ನನಗರ್ಥವಾಗದಿರುವಂತದ್ದು ನೀವೇಕೆ ನನ್ನನ್ನು ಬಲವಂತವಾಗಿ ಕಳಿಸಿದ್ರಿ.. ಬಹುಶಃ ಜೀವನ ಪೂರ್ತಿ ನನಗೆ ಈ ಪ್ರಶ್ನೆಗೆ ಉತ್ತರ ಸಿಗಲಾರದೇನೋ..

ನೀವು ನಮ್ಮನ್ನು ಬಿಟ್ಟುಹೋಗಿ ಆಗಲೇ ಒಂದು ವರ್ಷವಾಯಿತಾ ಎಂಬ ಆಶ್ಚರ್ಯ ಒಂದೆಡೆಯಾದರೆ... ನೀವು ಬಿಟ್ಟು ಹೋದ ಜವಾಬ್ದಾರಿಗಳಲ್ಲಿ ಒಂದನ್ನು ಈಡೇರಿಸಲಾಗಲಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಲೆ ಇದೆ. ಈ ಒಂದು ವರ್ಷದಲ್ಲಿ ನಿಮ್ಮೊಂದಿಗೆ ಹೇಳಿಕೊಳ್ಲಲೇ ಬೇಕಾದ ಅದೆಷ್ಟೋ ಖುಷಿಯ ವಿಷಯಗಳು ನನ್ನೊಂದಿಗೆ ಇವೆ. ನೀವಿಲ್ಲದ ಕೊರತೆಯನ್ನು ನಾನು ಅನಿಲ್ ಸರ್ ಹತ್ರ ಹೇಳಿಕೊಳ್ಳುವುದರ ಮೂಲಕ ಒಂದಷ್ಟು ನೀಗಿಸಿಕೊಂಡಿರುವೆನಾದರು.. ನೀವಿಲ್ಲದ ಕೊರತೆ ಕಾಡುತ್ತಲೆ ಇರುವುದು ಅಷ್ಟೇ ಸತ್ಯ.
ನಾನು ನಿಮಗೆ ಮಾತು ಕೊಟ್ಟಂತೆ ಈ ಒಂದು ವರ್ಷದಲ್ಲಿ ನಾನು ನನ್ನ ಸಿನಿಮಾ ಮಾಡಲಾಗಲಿಲ್ಲ.. ನನ್ನನ್ನು ಕ್ಷಮಿಸಿಬಿಡಿ.