Thursday, July 11, 2013

ಅನ್ನದ ಹೆಸರಲ್ಲಿ ಬಡವನ ದೌರ್ಭಾಗ್ಯ ಯೋಜನೆ

ಅಂತೂ ‘ಅನ್ನ ಭಾಗ್ಯ’ ಯೋಜನೆ ಜಾರಿಯಾಗಿರುವುದರಿಂದ ರಾಜ್ಯದ ಬಡವರ ಸಕಲ ಸಮಸ್ಯೆಗಳೂ ನಿವಾರಣೆಯಾಗಲಿವೆ ಎಂಬ ‘ಭ್ರಮೆ’ಯನ್ನು ಆಡಳಿತಾರೂಡ ಪಕ್ಶ ಹಾಗೂ ಆ ಪಕ್ಷವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸುವವರು ಹುಟ್ಟುಹಾಕುವುದರ ಜೊತೆಗೆ, ಈ ಯೋಜನೆಯನ್ನು ವಿರೋಧಿಸುತ್ತಿರುವವರನ್ನೆಲ್ಲ ವಿರೊದ ಪಕ್ಷದವರೊಂದಿಗೆ, ಮೇಲ್ವರ್ಗದವರೊಂದಿಗೆ ತಳುಕುಹಾಕಿ ಬಡವನ ಅನ್ನ ಕಸಿದುಕೊಳ್ಳಲು ಕುತಂತ್ರ ನಡೆಸಿದ್ದಾರೆ ಎಂದೇ ಆ ‘ಪಾಳಯ’ದವರು ಈ ‘ಪಾಳಯ’ದವರತ್ತ ತಮ್ಮ ಕೆಂಗಣ್ಣನ್ನು ಬೀರುತ್ತಿದ್ದಾರೆ.
ಈ ಎರಡೂ ‘ಪಾಳಯ’ದವರಿಂದ (ಪಾಳೆಗಾರರಿಂದ) ಹೊರತಾದ ಮೂರನೆ ಗುಂಪು ಎಲ್ಲೂ ತಮ್ಮ  ದನಿಯನ್ನು ಎತ್ತುತ್ತಲೇ ಇಲ್ಲ.
೧ರೂಪಾಯಿಗೆ ಅಕ್ಕಿ ಸಿಗುವುದರಿಂದ ಬಡವರು ಜೀವನ ಸುಧಾರಿಸುವುದೇ ಆಗಿದ್ದರೆ, ಈ ಹಿಂದೆ ಹಲವು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲೂ ೨ರೂಪಾಯಿಗೆ ಅಕ್ಕಿ ನೀಡಲಾಗಿತ್ತು.. ಅಂದರೆ ಅವರ ಜೀವನ ಇದರಲ್ಲಿ ಅರ್ಧದಷ್ಟಾದರೂ ಸುಧಾರಿಸಿರಬೇಕಿತ್ತು. ಹಾಗಿದ್ದಲ್ಲಿ.. ಅದೇ ಆಂಧ್ರದ ಶ್ರಮಿಕ ವರ್ಗ ಈ ಮಟ್ಟದಲ್ಲಿ ಬೆಂಗಳೂರಿಗೆ ವಲಸೆ ಏಕೆ ಬಂದರು?  ಈಗ ಕರ್ನಾಟಕದವರೇ ಸಾಕಷ್ಟು ಮಂದಿ ಬೆಂಗಳೂರಿಗೆ ಹೊಟ್ಟೆಪಾಡಿಗಾಗಿ ವಲಸೆ ಬಂದಿದ್ದಾರೆ, ಸರ್ಕಾರ ೩೦ ರೂಪಾಯಿಗೆ ಮೂವತ್ತು ಕೆಜಿ ಅಕ್ಕಿ ನೀಡುತ್ತಿದೆ ಎಂದು ಅವರೆಲ್ಲ ತಮ್ಮ ತಮ್ಮ ಊರಿಗೆ ಹಿಂದಿರುಗುತ್ತಾರ?
೬೬ ವರ್ಷಗಳಲ್ಲಿ ಬಹುಪಾಲು ಕರ್ನಾಟಕವನ್ನು ಆಳಿರುವ ಕಾಂಗ್ರೆಸ್ ಪಕ್ಷ ತಾನು ಬೆಳೆಸಿದ ಭ್ರಷ್ಟಾಚಾರವನ್ನು ಬಡವನಿಗೆ ಅಕ್ಕಿ ಒದಗಿಸಿದಷ್ಟೇ ಸುಲಭವಾಗಿ ನಿರ್ಮೂಲನೆ ಮಾಡುತ್ತದೆಯೇ? ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲವಾದರೆ, ಆಹಾರ ಸರಬರಾಜು ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚರದಿಂದ ಮುಕ್ತವಾಗಿ ಈ ಯೋಜನೆ ಬಡವನಿಗೆ ತಲುಪಿಸುತ್ತೇವೆ ಎಂದು ಈ ಸರ್ಕಾರದಿಂದ ಘೋಷಿಸಲು ಸಾಧ್ಯವೇ? ಅಥವಾ ಸರ್ಕಾರದ ಈ ಯೋಜನೆಯನ್ನು ಕಂಡಕಂಡೆಲ್ಲಾ ಹೊಗಳಿ ಜಾಗಟೆ ಬಾರಿಸುತ್ತಿರುವ ಹಿಂಬಾಲಕರೆಲ್ಲ ಸೇರಿ ಈ ಯೋಜನೆಯು ಪೂರ್ಣಪ್ರಮಾಣದಲ್ಲಿ ಬಡವನಿಗೆ ತಲುಪುವಲ್ಲಿ ಶ್ರಮಿಸುತ್ತಾರೆಯೇ? ಹಾಗಿದ್ದಲ್ಲಿ ಮಾತ್ರ ಈ ಯೋಜನೆ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಇಲ್ಲವಾದಲ್ಲಿ ಇದೇ ಸರ್ಕಾರದ ಕೃಪಾಪೋಷಿತ ದಲ್ಲಾಳಿಗಳ ಬೊಕ್ಕಸ ತುಂಬುತ್ತದೆಯೇ ಹೊರತು ಬಡವನ ಹೊಟ್ಟೆಯಲ್ಲ.

ಎಲ್ಲಿಯವರೆಗೆ ಬಡವನ ಸೊರಗಿರುವ ಗಂಟಲೊಳಗೆ ಅಡಗಿ ಸೊರಗಿರುವ ದನಿ ಹೊರಬಂದು ತನ್ನ ಹಕ್ಕನ್ನು  ಸರ್ಕಾರವನ್ನು ನಡುಬೀದಿಯಲ್ಲಿ ನಿಲ್ಲಿಸಿ ಕೇಳುವಂತಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ‘ಜನಪ್ರಿಯ’ ಯೋಜನೆಗಳಿಂದ ಬರೀ ಉಳ್ಳವರು ಮತ್ತಷ್ಟು ಉಳ್ಳವರಾಗುತ್ತಾರೆಯೇ ಹೊರತು ಬಡವ ಇದ್ದಲ್ಲಿಯೇ ಇರುತ್ತಾನೆ. ಯಾಕೆಂದರೆ ಸ್ವಾತಂತ್ರ್ಯ ಬರುವವರಿಗೂ ಭಾರತದ ಪ್ರತಿ ಪ್ರಜೆಯನ್ನೂ ತಮ್ಮ ಹೋರಾಟದಲ್ಲಿ ಭಾಗಿಯಾಗಿಸಿಕೊಂಡ ನಾಯಕರು ಆ ನಂತರ ಕಾಲಕ್ರಮೇಣ ತಮಗೆ ಅನುಕೂಲಸಿಂಧುವಾಗಿ ಸರ್ಕಾರವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ಜನಸಾಮಾನ್ಯನ್ನು ಇದ್ದಲ್ಲಿಯೇ ಇರುವಂತೆ ಮಾಡುವುದರ ಜೊತೆಗೆ ತಮ್ಮ ಹಕ್ಕನ್ನು ಕೇಳಲಾಗದೇ ಸರ್ಕಾರದ ಮುಂದೆ ಸದಾ ಮಂಡಿಯೂರಿ ಸರ್ಕಾರದ ಬಿಕ್ಷೆಗಾಗಿ ಎದುರು ನೋಡುವಂತೆ ಮಾಡಿರುವುದು ಈ ನಾಡಿನ ದುರಂತ. ತಮ್ಮಿಂದಲೇ ಆಯ್ಕೆಯಾದ ಸರ್ಕಾರದಿಂದ ತಮ್ಮ ಹಕ್ಕನ್ನು ಪಡೆಯುವುದಕ್ಕಾಗಿ ಎತ್ತಬೇಕಾದ ದನಿಯನ್ನು ಪೂರ್ತಿಯಾಗಿ ನುಂಗಿಹಾಕಿರುವ ಈ ಪಟ್ಟಭ್ದದ್ರ ಹಿತಾಸಕ್ತಿಗಳು, ಇಂದು ಅವನ ಉದ್ಧಾರದ ಮಾತುಗಳನ್ನಾಡುತ್ತಿದ್ದಾರೆ. ಇವರಿಗೆ(ಎಲ್ಲಾ ಪಕ್ಷದವರಿಗೂ ಸೇರಿಸಿ) ನಿಜವಾಗಿಯೂ ಬಡವನ ಬಗ್ಗೆ ಕಾಳಜಿ ಇದ್ದಿದ್ದರೆ ಹಣ ಬಲವಿಲ್ಲದ, ಜಾತಿ ಬೆಂಬಲವಿಲ್ಲದ ಕೇವಲ ಬಡತನದ ಅನುಭವವಿರುವ ಒಬ್ಬೇ ಒಬ್ಬ ವ್ಯಕ್ತಿಯನ್ನು ತಮ್ಮ ಪಕ್ಷಗಳಿಗಿರುವ ಹೆಸರಿನ ಬೆಂಬಲದಿಂದ ಜನಪ್ರತಿನಿಧಿಯನ್ನಾಗಿ ಮಾಡಲಿಲ್ಲವೇಕೆ?

ವಸಾಹತುಶಾಹಿಯ ತುಂಡಿನಂತೆ ನಡೆದುಕೊಳ್ಳುವ ಈ ನಾಯಕರು ಸರ್ವಾಧಿಕಾರಿಗಳಂತೆ ಆಡುವುದೇಕೆ? ಈ ಪಕ್ಷಗಳು ಬಡವರನ್ನೇಕೆ ವಿಧಾನಪರಿಷತ್ತಿನ ಮೂಲಕ ಆಯ್ಕೆ ಮಾಡಿ, ಸರ್ಕಾರದಲ್ಲಿ  ಪ್ರಮುಖ ಸ್ಥಾನವನ್ನು ನೀಡಿ ಅವರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಮಾಡುವುದಿಲ್ಲ. ಬಹುಶಃ ಆಡಳಿತ ನಡೆಸುವ ಅನುಭವ ಅವರಲ್ಲಿಲ್ಲ ಎಂಬ ಕಾರಣವನ್ನು ಮುಂದಿಡಬಹುದು. ತನ್ನದೇ ರಾಜ್ಯದ ಆಡಳಿತವನ್ನು ನಡೆಸುವ ಅನುಭವ ಪಡೆಯಲಾಗದ ಸ್ಥಿತಿಯಲ್ಲೇ ‘ಬಡವನ’ನ್ನು ಇರಿಸಿ, ಅವನ ಬಡತನವನ್ನು  ಕಾಯ್ದುಕೊಂಡು ಬಂದ ಖ್ಯಾತಿ ಯಾರಿಗೆ ನೀಡಬೇಕು?
ಜನರ ಬಳಿಗೇ ಸರ್ಕಾರವನ್ನು ತೆಗೆದುಕೊಂಡು ಹೋಗುವುದರ ಬದಲು ನೂರಾರು ಕಿಲೋಮೀಟರುಗಳಿಂದ ಬಡವನನ್ನು ಮುಖ್ಯಮಂತ್ರಿ ತನ್ನ ಬಾಗಿಲಬಳಿ ಕರೆಸಿ ಸಾಲುಗಟ್ಟಲೇ ನಿಲ್ಲಿಸ್ಕೊಂಡು ‘ಜನತಾದರ್ಶನ’ ಎಂಬ ಕಣ್ಣೊರೆಸುವ ತಂತ್ರ ಸ್ವಾತಂತ್ರ್ಯ ಪೂರ್ವದಲ್ಲಿದ್ದ ರಾಜರ ಸಾಮ್ರಾಜ್ಯಶಾಹಿ ಧೋರಣೆಯನ್ನು ತೋರಿಸುವುದಿಲ್ಲವೇ?

//ಮಂಸೋರೆ